ರಾಜಿನಾಮೆ ಕೊಟ್ಟು ನೋಡಿ: ಯುಟಿ ಖಾದರ್
ಸರ್ಕಾರ ವೈದ್ಯರು ರಾಜಿನಾಮೆ ಕೊಟ್ಟು ನೋಡಿ, ಮುಂದಿನ ಕ್ರಮ ಏನಾಗುತ್ತದೆ ಎಂದು.. ಆರೋಗ್ಯ ಸಚಿವ ಯುಟಿ ಖಾದರ್ ಅವರು ಹೇಳಿದ್ದಾರೆ.
ಬೆಂಗಳೂರು: ಸರ್ಕಾರ ವೈದ್ಯರು ರಾಜಿನಾಮೆ ಕೊಟ್ಟು ನೋಡಿ, ಮುಂದಿನ ಕ್ರಮ ಏನಾಗುತ್ತದೆ ಎಂದು.. ಆರೋಗ್ಯ ಸಚಿವ ಯುಟಿ ಖಾದರ್ ಅವರು ಹೇಳಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸರ್ಕಾರಿ ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯುಟಿ ಖಾದರ್ ಅವರು, ರಾಜಿನಾಮೆಯೇ ಪ್ರತಿಯೊಂದಕ್ಕೂ ಉತ್ತರವಲ್ಲ. ಮಿತಿ ಮೀರಿ ರಾಜಿನಾಮೆ ನೀಡುವುದಾದರೇ ನೀಡಿ ನೋಡಿ, ಮುಂದಿನ ಕ್ರಮ ಏನಾಗುತ್ತದೆ ಎಂದು ಖಡಕ್ ಉತ್ತರ ನೀಡಿದ್ದಾರೆ.
ವೈದ್ಯರ ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಪರಿಷ್ಕರಿಸಿದ್ದು, ವೇತನ ಕುರಿತ ಬೇಡಿಕೆಯನ್ನು ಕೂಡ ಸರ್ಕಾರ ಈಡೇರಿಸಿದೆ. ಹೀಗಿದ್ದೂ ರಾಜಿನಾಮೆ ನೀಡುವುದಾದರೆ ನೀಡಿ. ಆಗ ನನ್ನ ಮೂಡ್ ಹೇಗೆ ಇರುತ್ತದೆಯೋ ಹಾಗೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಮುಷ್ಕರ ನಿರತ ವೈದ್ಯರಿಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 3 ದಿನಗಳಿಂದ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರೆದಿದ್ದು, ವೈತನ ಪರಿಷ್ಕರಣೆ ಸೇರಿದಂತೆ ಸುಮಾರು 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಈ ಕುರಿತು ಚರ್ಚಿಸಲು ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಇಂದು ಸಂಜೆ ವಿಕಾಸ ಸೌಧದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ವೀರಭದ್ರಯ್ಯ ಮತ್ತು ಸಂಘದ ಇತರೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.