ಆರ್ಕಿಡ್ಸ್ ಶಾಲೆಯ ಕಾರ್ಯದರ್ಶಿ ರೆಡ್ಡಿ ಬಂಧನ
ಬೆಂಗಳೂರು: ಶಾಲಾ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶುಕ್ರವಾರ ಆರ್ಕಿಡ್ಸ್ ಶಾಲೆಯ ಕಾರ್ಯದರ್ಶಿ ಕೆಆರ್‌ಕೆ ರೆಡ್ಡಿ ಸೇರಿದಂತೆ ಶಾಲೆಯ ಹಲವು ಪದಾಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಆರ್ಕಿಡ್ಸ್ ಶಾಲೆಯ ಆವರಣದಲ್ಲೇ ಶಾಲಾ ಬಾಲಕಿಯ ಮೇಲೆ ನಡೆದಿದ್ದ ಪೈಶಾಚಿಕ ಕೃತ್ಯದ ವಿರುದ್ಧವಾಗಿ ಸಾರ್ವಜನಿಕ ಪ್ರತಿಭಟನೆ ನಡೆದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಇಂದು ನಡೆದ ಪೊಲೀಸ್ ಆಯುಕ್ತರ ಸಭೆಯಲ್ಲಿ ಗೃಹ ಸಚಿವ ಕೆಜೆ ಜಾರ್ಜ್ ಅವರು ಪಾಲ್ಗೊಂಡು ಚರ್ಚಿಸಿದರು. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್ ಅವರು ಶಾಲಾ ಆಡಳಿತ ಮಂಡಳಿಯ ಕೆಲ ಸದಸ್ಯರ ವಿರುದ್ಧ ಮೊಕದ್ದಮೆ ದಾಖಲಿಸಿರುವುದಾಗಿ ತಿಳಿಸಿದರು.
ಆರ್ಕಿಡ್ಸ್ ಶಾಲೆಯು ಶ್ರೀಗೌತಮ್ ಶಿಕ್ಷಣ ಟ್ರಸ್ಟ್‌ನ ಸಮೂಹದ್ದಾಗಿದ್ದು, ಟ್ರಸ್ಟ್ ಕಾರ್ಯದರ್ಶಿ ಕೆಆರ್‌ಕೆ ರೆಡ್ಡಿ ಅವರನ್ನು ಪ್ರಸ್ತುತ ಬಂಧಿಸಲಾಗಿದೆ ಎಂದು ಜಾರ್ಜ್ ತಿಳಿಸಿದರು. ಅಲ್ಲದೆ ಟ್ರಸ್ಟ್‌ನ ಅಧ್ಯಕ್ಷರಾದ ದುರ್ಗಾ (ಆರೋಪಿ ನಂ-1), ವೈ.ಶಿಲ್ಪಾ, ಟ್ರಸ್ಟ್ ಉಪಾಧ್ಯಕ್ಷರು (ಆರೋಪಿ ನಂ-2), ಸಮೂಹ ಕಾರ್ಯದರ್ಶಿ ಕೆಆರ್‌ಕೆ ರೆಡ್ಡಿ (ಆರೋಪಿ ನಂ-3) ಮತ್ತು ಯು.ಸುರೇಂದ್ರ ಬಾಬು, ಜಂಟಿ ಕಾರ್ಯದರ್ಶಿ (ಆರೋಪಿ ನಂ-4) ಅವರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಆರ್ಕಿಡ್ಸ್ ಶಾಲೆಯು 1ರಿಂದ5 ತರಗತಿ ವರೆಗೂ ಕನ್ನಡ ಮಾಧ್ಯಮಕ್ಕೆ ಮಾತ್ರ ಸರ್ಕಾರದ ಅನುಮತಿ ಪಡೆದಿದೆ. ಆದರೆ 1ರಿಂದ 7 ತರಗತಿ ವರೆಗೂ ಶಾಲೆ ನಡೆಸುತ್ತಿದ್ದು, ಆಂಗ್ಲ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿದೆ. ಹೀಗಾಗಿ ಶಾಲೆಯ ವಿರುದ್ಧ ಡಿಡಿಪಿಐ ಹೆಚ್.ಬಿ.ಮಂಜುನಾಥ್ ಅವರು ದೂರು ದಾಖಲಿಸಿದ್ದು, ಇದೇ ದೂರಿನ ಹಿನ್ನಲೆಯಲ್ಲಿ ಗೃಹ ಇಲಾಖೆ ಶಾಲೆಯ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಕಾನೂನು ಬಾಹಿರವಾಗಿ ಶಾಲೆ ನಡೆಸಿ ಜನರಿಗೆ ಮೋಸ ಮಾಡಲಾಗಿದೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.