ಬಾಲಬ್ರೂಯಿ ಸೇಫ್
ಪಾರಂಪರಿಕ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಬೆಂಗಳೂರು: ಬೆಂಗಳೂರಿನ ಖ್ಯಾತ ಪಾರಂಪರಿಕ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಐತಿಹಾಸಿಕ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸುವ ಅಥವಾ ನವೀಕರಣಗೊಳಿಸುವ ಯಾವುದೇ ಪ್ರಸ್ತಾಪ ರಾಜ್ಯಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಶಾಸಕರ ಅನುಕೂಲಕ್ಕಾಗಿ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸಿ ಅಲ್ಲಿ ಕ್ಲಬ್‌ಹೌಸ್ ನಿರ್ಮಿಸುವ ಪ್ರಸ್ತಾಪಕ್ಕೆ ಕಳೆದ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ಇದೇ ವಿಚಾರ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಮುಂದೆ ಕೂಡ ಪ್ರಸ್ತಾಪವಾಗಿತ್ತು. ಕಾಂಗ್ರೆಸ್ ಸರ್ಕಾರ ಬಾಲಬ್ರೂಯಿ ಪಾರಂಪರಿಕ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿ ಶಾಸಕರಿಗಾಗಿ ಕ್ಲಬ್‌ಹೌಸ್ ನಿರ್ಮಾಣ ಮಾಡಲಿದೆ ಎಂದು ಶಾಸಗಿ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವಿಚಾರ ಹೊರ ಬೀಳುತ್ತಿದ್ದಂತೆಯೇ ಬಿಪ್ಯಾಕ್ ಸಾಮಾಜಿಕ ಸಂಘಟನೆ ಸೇರಿದಂತೆ, ಹಲವು ಕಲಾವಿದರು, ಇತಿಹಾಸತಜ್ಞರು ಮತ್ತು ಪರಿಸರವಾದಿಗಳು ಕಟ್ಟಡವನ್ನು ನೆಸಮಗೊಳಿಸದಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.
ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿ-ಪ್ಯಾಕ್ ಸದಸ್ಯರು ಮನವಿ ಸಲ್ಲಿಸಿದ್ದು, ಕಟ್ಟಡವನ್ನು ನೆಲಸಮಗೊಳಿಸದಂತೆ ಕೇಳಿಕೊಂಡಿದೆ. ಇದೇ ವಿಚಾರವಾಗಿ ಸಂಘಟನೆಯ ಸದಸ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಿದ್ದರಾಮಯ್ಯ ಅವರ ಟ್ವೀಟ್ ವಿಚಾರ ಹೊರಬೀಳುತ್ತಿದ್ದಂತೆಯೇ ತನ್ನ ಪ್ರತಿಭಟನೆಯನ್ನು ಹಿಂಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪಷ್ಟನೆ ತಮಗೆ ಸಂತಸ ನೀಡಿದ್ದು, ಆದರೆ ಪಾರಂಪರಿಕ ಕಟ್ಟಡಗಳಿಗೆ ತೊಂದರಯಾದರೆ ತಾವು ಅನಿವಾರ್ಯವಾಗಿ ಮತ್ತೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಏನಿದು ವಿವಾದ?
ಐತಿಹಾಸಿಕ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸಿ ಅಲ್ಲಿ ಶಾಸಕರ ಉಪಯೋಗಕ್ಕಾಗಿ ಕ್ಲಬ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎಂದು ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಪತ್ರಿಕೆಯ ವರದಿಯನ್ನು ಆಧರಿಸಿ ಹಲವು ಗಣ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾಲಬ್ರೂಯಿ ಕಟ್ಟಡ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಪಾರಂಪರಿಕ ಕಟ್ಟಡವನ್ನು ಉಳಿಸುವ ಸಲುವಾಗಿ ಎನ್‌ಜಿಒಗಳು, ಇತಿಹಾಸ ತಜ್ಞರು, ಕಲಾವಿದರು ಬಿ-ಪ್ಯಾಕ್ ಸಂಘಟನೆಯ ನೇತೃತ್ವದಲ್ಲಿ ಒಂದೆಡೆ ಸೇರಿ ಪ್ರತಿಭಟನೆಗೆ ಮುಂದಾದವು. ಕಲಾವಿದ ಎಸ್ ಜಿ ವಾಸುದೇವ್, ಬಿ.ಸುರೇಶ್, ಶ್ರೀನಿವಾಸ್ ಕಪ್ಪಣ್ಣ ಮುಂತಾದವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಬಾಲಬ್ರೂಯಿ ಕಟ್ಟಡ ಉಳಿಸುವಂತೆ ಮನವಿ ಸಲ್ಲಿಸಿದ್ದರು. ಬಹುಜನ ಸಮಾಜವಾದಿ ಪಕ್ಷದ ಮಾರ್ತಾಂಡ ಮುನಿಯಪ್ಪ ಎಂಬ ಮುಖಂಡರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾದರು.
ಸಾಮಾಜಿಕ ತಾಣಗಳಲ್ಲಿಯೂ ಆರಂಭವಾಯಿತು ಅಭಿಯಾನ
ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಚರ್ಚೆಗಳಾಗಿ, ಬಾಲಬ್ರೂಯಿ ಕಟ್ಟಡ ಉಳಿಸಿ ಎಂಬ ಆಭಿಯಾನವೇ ಆರಂಭವಾಗಿತ್ತು. ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಲಾರಂಭಿಸಿದ್ದವು. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಬಿ-ಪ್ಯಾಕ್ ಸಂಘಟನೆ ಮುಂದಾಗಿತ್ತು. Bangalore Political Action Committee (BPAC) ನ ರೇವತಿ ಅಶೋಕ್, ರಜತಾ ಪ್ರಭಾಕರ್, ಅನಿಲ್ ಶೆಟ್ಟಿ, ಕಿರಣ್ ಮಜುಂದಾರ್ ಶಾ ಅವರ ಜೊತೆಗೆ ಅನೇಕ Intact ಸೇರಿದಂತೆ ಅನೇಕ ಸಂಘಟನೆಗಳು ಅಭಿಯಾನಕ್ಕೆ ಕೈ ಜೋಡಿಸಿದ್ದವು.
ಪೃಥ್ವಿ ಅರಸ್ ಎಂಬುವರು ಆನ್ ಲೈನ್ ಪಿಟೀಷನ್ ಹಾಕಿದ್ದರು. ಬಾಟ್ಲಿವಾಲ ಎಂಬುವವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 500ಜನರ ಸಹಿವುಳ್ಳ ಮನವಿ ಯನ್ನು ಕೂಡ ಸಲ್ಲಿಕೆ ಮಾಡಿದ್ದರು. ಒಟ್ಟಾರೆ ಸಾಮಾಜಿಕ ಸಂಘಟನೆಗಳ ಸತತ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪಾರಂಪರಿಕ ಕಟ್ಟಡದ ಕುರಿತಾಗಿ ಸ್ಪಷ್ಟ ನಿಲುವು ಪ್ರಕಟಿಸಿದೆ.