ನಾಳೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ವೈದ್ಯರಿಗೆ ಖಾದರ್ ಎಚ್ಚರಿಕೆ
ರಾಜಿನಾಮೆ ನೀಡದೇ ಮುಷ್ಕರದಲ್ಲಿ ಪಾಲ್ಗೊಂಡಿರುವ ವೈದ್ಯರು ಮಂಗಳವಾರದಿಂದಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು...
ಬೆಂಗಳೂರು: ರಾಜಿನಾಮೆ ನೀಡದೇ ಮುಷ್ಕರದಲ್ಲಿ ಪಾಲ್ಗೊಂಡಿರುವ ವೈದ್ಯರು ಮಂಗಳವಾರದಿಂದಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಆರೋಗ್ಯ ಸಚಿವ ಯುಟಿ ಖಾದರ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖಾದರ್ ಅವರು, ಈವರೆಗೂ 911 ಮಂದಿ ವೈದ್ಯರು ರಾಜಿನಾಮೆ ಸಲ್ಲಿಸಿದ್ದು, ತುಮಕೂರಿನಲ್ಲಿ ಅತಿ ಹೆಚ್ಚು ಅಂದರೆ 120 ಮಂದಿ ವೈದ್ಯರು ರಾಜಿನಾಮೆ ನೀಡಿದ್ದಾರೆ. ಉಳಿದಂತೆ ಚಿತ್ರದುರ್ಗ 101, ಬಳ್ಳಾರಿ 37, ಚಿಕ್ಕಮಗಳೂರು 39, ಮಂಗಳೂರು 4, ಶಿವಮೊಗ್ಗ 54, ಹಾಸನ 30, ಬೆಂಗಳೂರು 82, ಮಂಡ್ಯ 81, ಗುಲ್ಬರ್ಗಾ 52, ರಾಮನಗರ 46 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 53ಮಂದಿ ವೈದ್ಯರು ರಾಜಿನಾಮೆ ಸಲ್ಲಿಸಿದ್ದಾರೆ. ಈ ಪೈಕಿ ಕೆಲ ವೈದ್ಯರು ಒತ್ತಡಣಕ್ಕೆ ಮಣಿದು ರಾಜಿನಾಮೆ ಸಲ್ಲಿಸಿದ್ದರೆ, ಮತ್ತೆ ಕೆಲವರು ಸ್ವಇಚ್ಛೆಯಿಂದಲೇ ರಾಜಿನಾಮೆ ನೀಡಿದ್ದಾರೆ.
ಹೀಗಾಗಿ ರಾಜಿನಾಮೆ ಅಂಗೀಕರಿಸುವ ವಿಚಾರದಲ್ಲಿ ಸರ್ಕಾರ ಯಾವುದೇ ಆತುರ ತೋರುವುದಿಲ್ಲ. ವೈದ್ಯರಿಗೆ ಇನ್ನು ಸಮಯವಿದ್ದು ರಾಜಿನಾಮೆ ನಿರ್ಧಾರವನ್ನು ಹಿಂಪಡೆಯಬೇಕು. ನಾಳೆ ವೈದ್ಯರೊಂದಿಗೆ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧವಿದೆ. ವೈದ್ಯರ ಸಮಸ್ಯೆಗಳ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಖಾದರ್ ಅವರು ಹೇಳಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿ ಇಲ್ಲ, ಕಠಿಣ ಕ್ರಮ ಎದುರಿಸಿ
ಇನ್ನು ಮುಷ್ಕರ ನಿರತ ವೈದ್ಯರ ವಿರುದ್ಧ ಸಿಡಿಮಿಡಿಗೊಂಡಿರುವ ಸಚಿವ ಖಾದರ್ ಅವರು, ರಾಜಿನಾಮೆ ನೀಡದೇ ಮುಷ್ಕರದಲ್ಲಿ ಪಾಲ್ಗೊಂಡಿರುವ ವೈದ್ಯರು ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟದ ಕುರಿತು ಮಾತನಾಡಿದ ಖಾದರ್ ಅವರು, ವೈದ್ಯರ ಮುಷ್ಕರದಿಂದಾಗಿ ರೋಗಿಗಳು ಪರದಾಡುತ್ತಿದ್ದಾರೆ. ದಾದಿಯರೇ ಮಹಿಳೆಯೊಬ್ಬಳಿಗೆ ಹೆರಿಗೆ ಮಾಡಿಸಿದ ಘಟನೆಯನ್ನು ನಾನು ಗಮನಿಸಿದ್ದೇನೆ. ಹೀಗಾಗಿ ಸರ್ಕಾರ ತುರ್ತು ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಖಾದರ್ ತಿಳಿಸಿದರು.
ಒಟ್ಟಾರೆ ವೈದ್ಯರ ಮುಷ್ಕರ ವಿಚಾರ ತಾರಕ್ಕೇರಿದ್ದು, ನಾಳೆ ವಿಧಾನಸೌಧದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.