ವೈದ್ಯರಿಂದ ಸಾಮೂಹಿಕ ರಾಜಿನಾಮೆ: ಬಗ್ಗದ ರಾಜ್ಯ ಸರ್ಕಾರ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರ ತಾರಕಕ್ಕೇರಿದ್ದು, ಇಂದು ಸುಮಾರು 2296 ವೈದ್ಯರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರ ತಾರಕಕ್ಕೇರಿದ್ದು, ಇಂದು ಸುಮಾರು 2296 ವೈದ್ಯರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ತಾವು ರಾಜಿನಾಮೆಗೆ ಮುಂದಾಗಿರುವುದಾಗಿ ರಾಜ್ಯ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ ಅವರು ಹೇಳಿದ್ದು, ಅವರ ಸೂಚನೆಯಂತೆ ರಾಜ್ಯಾದ್ಯಂತ ಸುಮಾರು 2,296 ವೈದ್ಯರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಈ ಸಾಮೂಹಿಕ ರಾಜಿನಾಮೆ ಪತ್ರಗಳನ್ನು ವೈದ್ಯರು ಸಲ್ಲಿಸಿದ್ದಾರೆ.
ವೈದ್ಯರ ಪ್ರಮುಖ ಬೇಡಿಕೆಗಳೇನು..?
1) ಜಿಲ್ಲಾ ಆಸ್ಪತ್ರೆಗಳನ್ನ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಒಳಪಡಿಸೋದು
2) ಖಾಲಿ ಇರುವ ವೈದ್ಯರ ಹುದ್ದೆಗಳ ನೇಮಕ ಮಾಡಿಕೊಳ್ಳುವುದು
3) ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ನೇಮಕ ಮಾಡುವುದು
4) ವೇತನ ತಾರತಮ್ಯ ಸರಿಪಡಿಸೋದು
5) ವೈದ್ಯರಿಗೆ ಕಾಲಕಾಲಕ್ಕೆ ವೇತನ ನೀಡುವುದು.
ಈ ಮೇಲ್ಕಂಡ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ಈಡೇರಿಸಬೇಕು ಎಂದು ಬೆಂಗಳೂರಿನ ಸುಮಾರು 772, ಮೈಸೂರಿನ 729, ಗುಲಬರ್ಗಾದ 310, ಬೆಳಗಾವಿಯ 485 ವೈದ್ಯರು ತಮ್ಮ ರಾಜಿನಾಮೆ ಸಲ್ಲಿಸಿದ್ದು, ಉಳಿದ ವೈದ್ಯರು ನಾಳೆ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲೇ ವೈದ್ಯರು ರಾಜಿನಾಮೆ ಸಲ್ಲಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತ ಸರ್ಕಾರಿ ವೈದ್ಯರ ಸಾಮೂಹಿಕ ರಾಜಿನಾಮೆ ಪರ್ವಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ರಾಜಿನಾಮೆ ಕುರಿತಂತೆ ತಕ್ಷಣ ಕ್ರಮ ಜರುಗಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಪ್ರಸ್ತುತ ತಲೆದೋರಿರುವ ವೈದ್ಯರ ಸಮಸ್ಯೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡಿಕೊಂಡಿದೆ. ಇದಕ್ಕಾಗಿ ಆಯುಷ್ ಮತ್ತು ಆಯುರ್ವೇದ ವೈದ್ಯರನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಅಗತ್ಯ ಬಿದ್ದರೆ ಖಾಸಗಿ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ನೆರವು ಕೂಡ ಪಡೆಯಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಯುಟಿ ಖಾದರ್ ಅವರು, ವೈದ್ಯರ ಬ್ಲಾಕ್‌ಮೇಲ್ ತಂತ್ರಕ್ಕೆ ಸರ್ಕಾರ ಮಣಿಯುವುದಿಲ್ಲ. ಎಲ್ಲಕ್ಕೂ ರಾಜಿನಾಮೆಯೇ ಪರಿಷ್ಕಾರವಲ್ಲ. ರಾಜಿನಾಮೆ ನೀಡಲೇ ಬೇಕು ಎಂದು ವೈದ್ಯರು ನಿರ್ಧರಿಸಿದ್ದರೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ವೈದ್ಯರು ರಾಜಿನಾಮೆ ಸಲ್ಲಿಸಿದ್ದರೂ ಅವರು ಒಂದು ತಿಂಗಳ ಕಾಲ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಈ ವೇಳೆ ಅವರು ಒತ್ತಡಕ್ಕೆ ಮಣಿದು ರಾಜಿನಾಮೆ ನೀಡಿದ್ದಾರೆಯೇ ಅಥವಾ ಸ್ವಇಚ್ಛೆಯಿಂದಲೇ ರಾಜಿನಾಮೆ ನೀಡಿದ್ದಾರೆ ಎಂದು ಪರಿಶೀಲಿಸುತ್ತೇವೆ. ಅಲ್ಲದೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ಯುಟಿ ಖಾದರ್ ಅವರ ನೇತೃತ್ವದಲ್ಲಿ ಮುಷ್ಕರ ನಿರತ ವೈದ್ಯರೊಂದಿಗೆ ಚರ್ಚೆ ನಡೆಸಲಾಯಿತು. ಚರ್ಚೆ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ವೈದ್ಯರ 12 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ. ಎಲ್ಲಕ್ಕೂ ರಾಜಿನಾಮೆಯೇ ಪರಿಹಾರವಲ್ಲ. ಇದನ್ನೂ ಮೀರಿ ವೈದ್ಯರು ರಾಜಿನಾಮೆ ನೀಡಿದರೆ ರಾಜ್ಯ ಸರ್ಕಾರ ಇನ್ನೂ ಜೀವಂತವಾಗಿದೆ ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾಳೆ ವಿಧಾನಸೌಧದಲ್ಲಿ ಮತ್ತೆ ಮುಷ್ಕರ ನಿರತ ವೈದ್ಯರೊಂದಿಗೆ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ಯುಟಿ ಖಾದರ್ ಮತ್ತು ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ಡಾ.ರವೀಂದ್ರ ಅವರು ಪಾಲ್ಗೊಳ್ಳಲ್ಲಿದ್ದಾರೆ.