ವಾಟ್ಸ್ಆಪ್ ನಿಂದ ವೇಶ್ಯಾವಾಟಿಕೆ ಬಹಿರಂಗ
ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಟ್ವಿಟರ್..
ಬೆಂಗಳೂರು: ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ವಾಟ್ಸ್ ಆಪ್ ಮೂಲಕ ನೀಡಿದ ದೂರಿನ ಆಧಾರದ ಮೇಲೆ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಗ್ರಾಹಕರು ಸೇರಿ ಐವರನ್ನು ಬಂಧಿಸಿದ್ದಾರೆ.
ವಿಜಯನಗರದ ರವಿಕುಮಾರ್ (29), ಉಡುಪಿಯ ಸಂತೋಷ ಕುಮಾರ್ (32) ಹಾಗೂ ಕೊಳ್ಳೆಗಾಲ ಲಿಂಗರಾಜು (31), ಗ್ರಾಹಕರಾದ ಶಿವಮೊಗ್ಗದ ಪೂರ್ಣ ಚಂದ್ರ (25) ಹಾಗೂ ಹುಬ್ಬಳ್ಳಿಯ ಸಿರಾಜುಲ್ಲಾ (43) ಬಂಧಿತರು. ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಆಗಿದ್ದ ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಅವರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆಪ್ ಮೂಲಕ ಸಾರ್ವಜನಿಕರೊಬ್ಬರು ವೇಶ್ಯಾವಾಟಿಕೆ ದಂಧೆ ಬಗೆಗಿನ ಜಾಹಿರಾತು ಫೋಟೋ ಸಮೇತ ದೂರು ನೀಡಿದ್ದರು.
ಆಯುಕ್ತರ ನಿರ್ದೇಶನದಂತೆ ಸಿಸಿಬಿ ಪೊಲೀಸರ ವಿಶೇಷ ತಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ದಿಲೀಪ್ ಎಂಬಾತನನ್ನು ಶಾಂತಿ ಸಾಗರ ಹೊಟೆಲ್ ಬಳಿ ಬರುವಂತೆ ಕೇಳಿದ್ದಾನೆ. ಮಫ್ತಿಯಲ್ಲಿ ತೆರಳಿದ ಪೊಲೀಸ್ ದಿಲೀಪ್ನನ್ನು ಭೇಟಿ ಮಾಡಿದ್ದಾರೆ. ಅಲ್ಲಿಂದ ದಿಲೀಪ್ ಇಂದಿರಾನಗರದ 1 ಹಂತ 9ನೇ ಮುಖ್ಯರಸ್ತೆಯಲ್ಲಿರುವ ಕಟ್ಟಡದ ಬಳಿ ಕರೆದುಕೊಂಡು ಜಾಗ ತೋರಿಸಿ ಹೊರಟು ಹೋಗಿದ್ದಾನೆ. ಮಫ್ತಿಯಲ್ಲಿದ್ದ ಪೊಲೀಸ್ ಇತರ ಪೊಲೀಸರಿಗೆ ಮಾಹಿತಿ ನೀಡಿ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ನಗರದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡುವ ಆರೋಪಿಗಳು ದೇಶದ ವಿವಿಧ ನಗರಗಳಿಂದ ಹುಡುಗಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.