ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವೈದ್ಯರ ರಾಜಿನಾಮೆ ಅಂಗೀಕಾರ ಇಲ್ಲ

ವೈದ್ಯರ ರಾಜಿನಾಮೆಯನ್ನು ಸರ್ಕಾರ ಅಂಗೀಕರಿಸುವುದಿಲ್ಲ, ಮುಷ್ಕರ ನಡೆಸುತ್ತಿರುವವರ ಜತೆ ಬುಧವಾರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Srinivasa Murthy VN
Updated On : 29 Oct 2014, 9:07 am

ಬೆಂಗಳೂರು: ವೈದ್ಯರ ರಾಜಿನಾಮೆಯನ್ನು ಸರ್ಕಾರ ಅಂಗೀಕರಿಸುವುದಿಲ್ಲ, ಮುಷ್ಕರ ನಡೆಸುತ್ತಿರುವವರ ಜತೆ ಬುಧವಾರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಬುಧವಾರ ಮಧ್ಯಾಹ್ನ 3.30ಕ್ಕೆ ವೈದ್ಯಾಧಿಕಾರಿಗಳ ಸಂಘದ ಜತೆ ನಾನು ಚರ್ಚೆ ನಡೆಸಲಿದ್ದೇನೆಯ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಸರ್ಕಾರದ ಮೇಲಿರುವಷ್ಟೇ ಜವಾಬ್ದಾರಿ ವೈದ್ಯರ ಮೇಲೂ ಇದೆ. ಹೀಗಾಗಿ ಮುಷ್ಕರ ಕೈಬಿಡುವಂತೆ ಹೇಳಿದ್ದೇನೆ. ಸಾರ್ವಜನಿಕರು ವೈದ್ಯರನ್ನೂ ದೂಷಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ ದಮ್ಮುಕಟ್ಟಿಕೊಂಡು ಇಲಾಖೆ ನಡೆಸುವುದು ಸಾಧ್ಯವಿಲ್ಲ. ಪ್ರೀತಿಪೂರ್ವಕವಾಗಿ ಕೆಲಸ ಮಾಡಬೇಕು. ಈ ಸಂಬಂಧ ವೈದ್ಯಾಧಿಕಾರಿಗಳು ಸರ್ಕಾರದ ಜೊತೆ ಸ್ಪಂಧಿಸಬೇಕು. ಅವರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮಾತುಕತೆಗೆ ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದರು.

ನಾವು ವೈಧ್ಯರ ಜೊತೆ ಸಂಘರ್ಷಕ್ಕೆ ಇಳಿದಿಲ್ಲ. ಅವರು ಮುಷ್ಕರ ನಡೆಸುವುದಕ್ಕೆ ಮುನ್ನವೇ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಭಿನ್ನಾಭಿಪ್ರಾಯ ಮರೆತು ಕರ್ತವ್ಯಕ್ಕೆ ಹಾಜರಾಗಿ ಎಂದು ಕಿವಿ ಮಾತು ಹೇಳಿದರು.

ವೈದ್ಯರ ಮುಷ್ಕರಕ್ಕೆ ಇಬ್ಬರ ಬಲಿ
ಸಕಲೇಶ ಪುರ/ಮಾಗಡಿ:
ಪರ್ಯಾಯ ವ್ಯವಸ್ಥೆ ಸರ್ಕಾರ ಹೇಳಿಕೊಳ್ಳತ್ತಿದ್ದರೂ ವೈದ್ಯರ ಮುಷ್ಕರದ ಬಿಸಿ ಜನಸಾಮಾನ್ಯರಿಗೆ ಜೋರಾಗಿ ತಟ್ಟಿದೆ.

ಸೋಮವಾರ ಇಬ್ಬರು ರೋಗಿಗಳು ಮೃತಪಟ್ಟಿದ್ದು, ಸಕಾಲದಲ್ಲಿ ವೈದ್ಯರಿಂದ ಚಿಕಿತ್ಸೆ ದೋರೆಯದೆ ಅಸುನೀಗಿದ್ದಾರೆ ಎನ್ನುವುದು ಕುಟುಂಬ ಸದಸ್ಯರ ಆರೋಪ. ರಾಜಸ್ತಾನ ಮೂಲದ ವಾಸಿಮಲ್ಜಿ (57) ಸಕಲೇಶಪುರದಲ್ಲಿ ಮೃತಪಟ್ಟಿದ್ದಾರೆ. ಪಟ್ಟಣ ಬಿಎಂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಇವರು ದುಡಿಯುತ್ತಿದ್ದರು. ಸೋಮವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಮುಷ್ಕರದಿಂದಾಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಾಲಕಿ ಸಾವು: ವೈದ್ಯರ ಮುಷ್ಕರದಿಂದಾಗಿಮಾಗಡಿ ತಾಲ್ಲೂಕಿನ ಗುಡೇಮಾರನ ಹಳ್ಳಿ ಮತ್ತು ಸೋಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ದೊರೆಯದೇ ಅನವಾರೋಗ್ಯ ಪೀಡಿತ ಬಾಲಕಿ ಮೃತಪಟ್ಟಿದ್ದಾಳೆ. ಮಾಗಡಿ ತಾಲ್ಲೂಕಿನ ಕೂಡ್ಲೂರು ಗ್ರಾಮದ ರಂಗನಾಥ್ ಪುತ್ರಿ ರಮ್ಯ (10) ಮೃತ ಬಾಲಕಿ. ತೀವ್ರ ಜ್ವರದಿಂದ ಅಸ್ವಸ್ಥಳಾಗಿದ್ದ ಆಕೆಯನ್ನು ಪೋಷಕರು ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಕೆ ನಿತ್ರಾಣಳಾಗಿ ಮೃತಪಟ್ಟಿದ್ದಾಳೆ. ಸಿಟ್ಟಿಗೆದ್ದ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement