ಕೆಲಸಗಳ್ಳರ ಪಾಲಿಗೆ ನಾನು ಒರಟ
ಕೆಲಸ ಮಾಡದ ಸಚಿವರು, ಅಧಿಕಾರಿಗಳನ್ನು ಕಠಿಣ ಶಬ್ದದಿಂದ ನಿಂದಿಸುವೆ: ಸಿಎಂ
ಬೆಂಗಳೂರು: ಕೆಲಸ ಮಾಡದ ಸೋಮಾರಿಗಳ ಪಾಲಿಗೆ ಮಾತ್ರ ನಾನು ಒರಟು ಸ್ವಭಾವದವನು. ಕೆಲಸ ಮಾಡದ ಸಚಿವರು, ಶಾಸಕರು, ಅಧಿಕಾರಿಗಳನ್ನು ಕಠಿಣ ಶಬ್ದದಿಂದ ನಿಂದಿಸುತ್ತೇನೆ. ಅದು ವೈಯುಕ್ತಿಕ ದ್ವೇಷದಿಂದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರಕ್ಕೆ ಯಶಸ್ಸು ತಂದುಕೊಡುವ ಅಥವಾ ಪಾತಾಳಕ್ಕೆ ತಳ್ಳುವ ಶಕ್ತಿ ಇರುವುದು ಸರ್ಕಾರಿ ನೌಕರರಿಗೆ ಮಾತ್ರ. ಇವರ ಶ್ರಮವೇ ನಮ್ಮ ಯಶಸ್ಸಿಗೆ ಕಾರಣ. ಹೀಗಾಗಿ ಸರ್ಕಾರ ಸದಾ ನಿಮ್ಮೊಡನೆ ಇರುತ್ತದೆ ಎಂದರು.
ಸರ್ಕಾರದಲ್ಲಿ ಕೆಲಸ ಮಾಡುವ ಸಚಿವರು, ಶಾಸಕರು, ಅಧಿಕಾರಿಗಳು ಎಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ನಾವು ಮನಃಸ್ತಾಪ ಮಾಡಿಕೊಳ್ಳದೇ ಸಮಾಜದ ಒಳಿತಿಗೆ ಶ್ರಮಿಸಬೇಕು. ಸರ್ಕಾರಿ ನೌಕರರ ನ್ಯಾಯಯುತವಾದ ಎಲ್ಲ ಬೇಡಿಕೆಗಳಿಗೂ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಡಿ.ಎ ಹೆಚ್ಚಿಸಿದ ಕೂಡಲೇ ರಾಜ್ಯದಲ್ಲೂ ಸರ್ಕಾರಿ ನೌಕರರ ಡಿಎ ಹೆಚ್ಚಳಕ್ಕೆ ಆದೇಶ ನೀಡಲಾಗಿದೆ ಎಂದರು. ಸರ್ಕಾರಿ ನೌಕರರು ಜನರ ಕೆಲಸವನ್ನು ಜನಾರ್ದನನ ಕೆಲಸ ಎಂದುಕೊಂಡು ಬಡವರಿಗೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಬೇಕು ಎಂದರು. ನೌಕರರ ಸಂಘದ ಅಧ್ಯಕ್ಷ ಬೈರಪ್ಪ ಅವರು ಸೌಮ್ಯ ಸ್ವಭಾವದವರು. ಸರ್ಕಾರಿ ನೌಕರರ ಯಾವುದೇ ಸಮಸ್ಯೆ ಇದ್ದರೂ ಸಂಘರ್ಷ ಮಾಡದೇ ಚರ್ಚೆಯ ಮೂಲಕವೇ ಬಗೆಹರಿಸಿಕೊಳ್ಳುತ್ತಾ ಬಂದಿದ್ದಾರೆ. ಇದು ಉತ್ತಮ ನಾಯಕತ್ವದ ಗುಣ ಎಂದು ಶ್ಲಾಘಿಸಿದರು.
ಖಾಲಿ ಹುದ್ದೆ ಭರ್ತಿ ಮಾಡಿ
ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವ ಕೆಲಸವಾಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ ಒತ್ತಾಯಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯಲ್ಲಿಯೂ ನೌಕರರ ಕೊರತೆಯಿಂದಾಗಿ 30 ಸಾವಿರ ಪ್ರಕರಣ ಇತ್ಯರ್ಥಗೊಳ್ಳದೇ ಬಾಕಿ ಉಳಿದಿದೆ. ಜತೆಗೆ ಇನ್ನಿತರ ಇಲಾಖೆಗಳಲ್ಲಿಯೂ ಹುದ್ದೆ ಖಾಲಿ ಇದೆ. ಸರ್ಕಾರ ಇವುಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.