ಠಕ್ಕ ಶಾಲೆಗಳಿಗೆ ಶಿಕ್ಷೆ
ಅನಧಿಕೃತ ಶಾಲೆಗಳ ವಿರುದ್ಧ ಕೊನೆಗೂ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ, ಎಲ್ಲ 204 ಬಿಇಒ ಹಾಗೂ 34 ಡಿಡಿಪಿಐಗಳಿಗೆ ಅನಧಿಕೃತ ಶಾಲೆಗಳನ್ನು ಗುರುತಿಸಿ..
ಬೆಂಗಳೂರು: ಅನಧಿಕೃತ ಶಾಲೆಗಳ ವಿರುದ್ಧ ಕೊನೆಗೂ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ, ಎಲ್ಲ 204 ಬಿಇಒ ಹಾಗೂ 34 ಡಿಡಿಪಿಐಗಳಿಗೆ ಅನಧಿಕೃತ ಶಾಲೆಗಳನ್ನು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸಿದ್ದಾರೆ.
ಆದರೆ ಶಾಲೆಗಳ ವಿರುದ್ಧ ಹೇಗೆ ಕ್ರಮ ಜರುಗಿಸುವುದು, ಮಕ್ಕಳ ಭವಿಷ್ಯ ಏನು ಎಂಬುವುದರ ಕುರಿತು ಸರ್ಕಾರದ ಬಳಿ ಉತ್ತರವಿಲ್ಲ. ಆರ್ಕಿಡ್ಸ್ ಶಾಲೆಯ ಅವಾಂತರದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದೆ. ಶಾಲೆಗಳನ್ನು ಗುರುತಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಆದರೆ ಇನ್ನು 3 ತಿಂಗಳಿನಲ್ಲಿ ಈ ಗೊಂದಲಗಳಿಗೆ ತೆರೆ ಎಳೆಯುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಸ್ಪಷ್ಟಪಡಿಸಿದ್ದಾರೆ.
ಅನಧೃಕೃತ ಶಾಲೆಗಳ ವಿರುದ್ಧ ಐಸಿಸಿ ಸೆಕ್ಷನ್ 420 ಹಾಗೂ ಆರ್‌ಟಿಇ ನಿಯಮ ಉಲ್ಲಂಘನೆ ಪ್ರಕಾರ ದೂರು ದಾಖಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಇಷ್ಟು ವರ್ಷಗಳ ಕಾಲ ಸಿವಿಲ್ ಕೋಡ್‌ಗಳ ಮೂಲಕವಾಗಿ ಕ್ರಮ ಜರುಗಿಸಿದ್ದಾಯಿತು. ಇನ್ನು ಕ್ರಿಮಿನಲ್ ಮೊಕದ್ದಮೆ ಮಾತ್ರ ಬಾಕಿ ಉಳಿದಿದೆ ಎಂದು ಅವರು ಹೇಳಿದರು. ಶಿಕ್ಷಣ ಹಕ್ಕು ಕಾಯಿದೆ ಹಾಗೂ ಕರ್ನಾಟಕ ಶಿಕ್ಷಣ ಕಾಯಿದೆಗೆ ವಿರುದ್ಧವಾಗಿ ಶಾಲೆ ನಡೆಸುತ್ತಿದ್ದರೆ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಲಾಗಿದೆ. ಆಯಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಬಗೆಗೂ ಸರ್ಕಾರ ಗಂಭೀರ ಚಮಂತನೆ ಮಾಡಲಿದೆ ಎಂದು ಉನ್ನತಾಧಿಕಾರಿಗಳ ಸಭೆ ಬಳಿಕ ತಿಳಿಸಿದ್ದಾರೆ.
ಕಾಯಿದೆ ತಿದ್ದುಪಡಿ
ಕರ್ನಾಟಕ ಶಿಕ್ಷಣ ಕಾಯಿದೆಯಿಂದ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳನ್ನು ಹೊರಗಿಡಲಾಗಿದೆ. ಇದರಿಂದ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ವಿಬ್‌ಗ್ಯೋರ್ ಶಾಲೆ ವಿಚಾರದಲ್ಲಿ ಹೀಗಾಗಿದೆ. ಈ ಹಿನ್ನಲೆಯಲ್ಲಿ ಕಾಯಿದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಮುಂದಿನ ಅಧಿವೇಶನ ಅಂತ್ಯವಾಗುವುದರೊಳಗೆ ಈ ಕ್ರಮ ನಿರೀಕ್ಷಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
ವರ್ಗಕ್ಕೆ ನಿಯಮ
ಶಿಕ್ಷಣ ಇಲಾಖೆಯ ಬಿಇಒ, ಡಿಡಿಪಿಐ ಹಾಗೂ ಉಪಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ಬೇರೆ ವಲಯಕ್ಕೆ ವರ್ಗ ಮಾಡಬೇಕು ಅದರಿಂದ ಮಾತ್ರ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂದು ರಾಜ್ಯಪಾಲರು ಸಲಹೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಚಿಂತನೆ ನಡೆಸಿದೆ ಎಂದು ಕಿಮ್ಮನೆ ತಿಳಿಸಿದ್ದಾರೆ.
ಆರ್ಕಿಡ್ಸ್ ಭವಿಷ್ಯ ಇಂದು ನಿರ್ಧಾರ
ಮಾನ್ಯತೆ ಇಲ್ಲದೇ ಶಾಲೆ ನಡೆಸುತ್ತಿರುವ ಬೆಂಗಳೂರಿನ ಆರ್ಕಿಡ್ಸ್ ಶಾಲೆ ಕುರಿತಂತೆ ಗುರುವಾರ ಅಂತಿಮ ಆದೇಶ ಹೊರ ಬೀಳಲಿದೆ. ಪಾಲಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಹಿತಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಕಾನೂನು ಇಲಾಖೆ ಅಭಿಪ್ರಾಯ ಕೇಳಲಾಗಿದೆ. ಆದರೆ ಈ ಶೈಕ್ಷಣಿಕ ವರ್ಷದ ಮಟ್ಟಿಗೆ ಮುಂದುವರೆಸುವಂತೆ ಪಾಲಕರು ಮನವಿ ಮಾಡಿದ್ದಾರೆ ಎಂದು ಕಿಮ್ಮನೆ ತಿಳಿಸಿದರು. ಭಾಷಾ ಮಾಧ್ಯಮದ ಪ್ರಕರಣದಲ್ಲಿ ಸುಪ್ರೀಂ ಆದೇಶವನ್ನು ಆಡಳಿತ ಮಂಡಳಿಗಳು ತಮ್ಮ ತಪ್ಪಿಗೆ ಆಶ್ರಯವನ್ನಾಗಿ ಮಾಡಿಕೊಳ್ಳುತ್ತಿವೆ. ಆದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಮಾನ್ಯತೆ ನೀಡುವಾಗ ಅಕ್ರಮ ಆಗಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದರು.
ಪಾರದರ್ಶಕ ವ್ಯವಸ್ಥೆ
ರಾಜ್ಯದಲ್ಲಿ ಯಾವ ಶಾಲೆಗೆ ಮಾನ್ಯತೆ ಇದೆ, ಇಲ್ಲ ಎಂದು ತಿಳಿಯಲು ಪಾರದರ್ಶಕ ಸೌಲಭ್ಯವಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿದ ಸಚಿವರು, ಖಾಸಗಿ ಶಾಲೆಗಳಿಗೆ ಹೋಗುವವರ ಪಾಲಕರೆಲ್ಲರೂ ವಿದ್ಯಾವಂತರು. ಅದನ್ನು ವಿಚಾರಿಸಿಯೇ ಕಳುಹಿಸುತ್ತಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಇದ್ಯಾವುದೇ ಸಮಸ್ಯೆಯಿಲ್ಲ ಎಂದರು. ಆದರೆ ಮತ್ತೆ ಮತ್ತೆ ಪ್ರಶ್ನಿಸಿದಾಗ, ಬಿಇಒ ವರದಿ ಆಧರಿಸಿ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಲು ಕ್ರಮದ ಭರವಸೆ ನೀಡಿದರು.