ಹೈಕೋರ್ಟ್ನಲ್ಲಿನ್ನು ವೈಫೈ
ರಾಜ್ಯ ಹೈಕೋರ್ಟ್ನಲ್ಲಿ ವೈ-ಫೈ ತಂತ್ರಜ್ಞಾನ ಅಳವಡಿಸಲಾಗಿದ್ದು, ಇಂಥ ತಂತ್ರಜ್ಞಾನ ಪಡೆದ ಮೊದಲನೇ ಉಚ್ಛ ನ್ಯಾಯಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.
-ವಿಶೇಷ ವರದಿ
ಬೆಂಗಳೂರು: ಐಟಿ ಸಿಟಿ ಎಂದೇ ಖ್ಯಾತಿ ಪಡೆದರು ಬೆಂಗಳೂರು ಮತ್ತೊಂದು ದಾಖಲೆಗೆ ಸಜ್ಜಾಗಿದೆ. ರಾಜ್ಯ ಹೈಕೋರ್ಟ್ನಲ್ಲಿ ವೈ-ಫೈ ತಂತ್ರಜ್ಞಾನ ಅಳವಡಿಸಲಾಗಿದ್ದು, ಇಂಥ ತಂತ್ರಜ್ಞಾನ ಪಡೆದ ಮೊದಲನೇ ಉಚ್ಛ ನ್ಯಾಯಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಸುಮಾರು 25 ಲಕ್ಷ ರು. ಯೋಜನೆ ಇದಾಗಿದ್ದು, ಕೇವಲ 2 ತಿಂಗಳಲ್ಲಿ ಪೂರ್ಣಗೊಂಡಿದೆ. ಇದರಿಂದ ಹೈಕೋರ್ಟ್ನಲ್ಲಿ ವೈ-ಫೈ ಸೌಲಭ್ಯ ಅಳವಡಿಸಬೇಕು ಎಂಬ ವಕೀಲರ ಬಹುದಿನದ ಬೇಡಿಕೆ ಈಡೇರಿದೆ.
ಈ ವೈ-ಫೈ 512ಕೆಬಿಪಿಎಸ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ರಾಜ್ಯ ಹೈಕೋರ್ಟ್ನಲ್ಲಿ ವೈ-ಫೈ ಅಳವಡಿಸುವಂತೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾರನ್ನು ಕೋರಿದ್ದರು. ಮುಖ್ಯ ನ್ಯಾಯಮೂರ್ತಿಯವರು ಇದಕ್ಕೆ ಸಮ್ಮತಿ ನೀಡಿದ್ದರು. ಈ ಕುರಿತು ರಿಜಿಸ್ಟ್ರಾರ್ ಜನರಲ್ ಬಿ.ಎ.ಪಾಟೀಲ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ರಾಜ್ಯದ ಇ-ಆಡಳಿತ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕೂಡ ಇದಕ್ಕೆ ಪೂರಕವಾಗಿ ಸ್ಪಂಧಿಸಿತ್ತು.
ತಂತ್ರಜ್ಞಾನ ಅಳವಡಿಸಿಕೊಳ್ಳುವ ವಿಚಾರದಲ್ಲಿ ರಾಜ್ಯ ಹೈಕೋರ್ಟ್ ಸದಾ ಮುಂಚೂಣಿಯಲ್ಲಿರುತ್ತದೆ. ಈ ಹಿಂದೆಯೇ ಸುಲಭವಾಗಿ ಪ್ರಕರಣಗಳ ಮಾಹಿತಿ ತಿಳಿಯಲು ಕೋರ್ಟ್ ಆವರಣದಲ್ಲಿ ಟಚ್ ಸ್ಕ್ರೀನ್ ಕಿಯೋಸ್ಕ್ ಸ್ಥಾಪಿಸಲಾಗಿತ್ತು. ಎಲ್ಲೆಡೆ ಡಿಸ್ಪ್ಲೇ ಬೋರ್ಡ್ ಕೂಡ ಅಳವಡಿಸಲಾಗಿತ್ತು. ಇತ್ತೀಚೆಗೆ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಶನ್ ಕೂಡ ಪ್ರಾರಂಭಸಲಾಗಿತ್ತು. ಇದೀಗ ವೈ-ಫೈ ಅಳವಡಿಸುವ ಮೂಲಕ ಹೈ ಫೈ ಆಗಿದೆ.
ಏನಿದು ವೈಫೈ?
ವೈ-ಫೈ ಎಂದರೆ ವೈರ್ಲೆಸ್ ಫಿಡಿಲಿಟಿ ಎಂದರ್ಥ. ಇಂಟರ್ನೆಟ್ ಅನ್ನು ಉತ್ತಮ ಸಾಧನವಾಗಿದೆ. ಹೈಕೋರ್ಟ್ನಲ್ಲಿ ಅಳವಡಿಸಿರುವ ವೈ-ಫೈ ನಿಂದ ಉತ್ತಮವಾಗಿ ಇಂಟರ್ನೆಟ್ ಬಳಸಿಕೊಳ್ಳಬಹುದು. ಹೈಕೋರ್ಟ್ನಲ್ಲಿ ಸದ್ಯ 4000 ವಕೀಲರು, ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಅಧಿಕಾರಿಗಳಿದ್ದಾರೆ. ಸಾವಿರಾರು ಮಂದಿ ಸಾರ್ವಜನಿಕರು ನಿತ್ಯ ಭೇಟಿ ನೀಡುತ್ತಿರುತ್ತಾರೆ. ಅಗತ್ಯ ಅಥವಾ ತುರ್ತು ಸಂದರ್ಭದಲ್ಲಿ ಕಕ್ಷಿದಾರರು ಇಂಟರ್ನೆಟ್ಗಾಗಿ ಸೈಬರ್ ಸೆಂಟರ್ ಹುಡುಕಿಕೊಂಡು ಹೊರಹೋಗಬೇಕಿತ್ತು. ಇನ್ನು ಮುಂದೆ ಇಂಟರ್ನೆಟ್ ಸೌಲಭ್ಯವನ್ನು ನ್ಯಾಯಾಲಯ ಅಂಗಳದಲ್ಲೇ ಪಡೆದುಕೊಳ್ಳಬಹುದು.
ಉಪಯೋಗವೇನು?
ಹೈಕೋರ್ಟ್ನ ಅಧಿಕೃತ ವೆಬ್ಸೈಟಿನಲ್ಲಿ ನಿತ್ಯಕಾರ್ಯ ನಿರ್ವಹಿಸುವ ನ್ಯಾಯಪೀಠ, ಪ್ರಕರಣಗಳು ಹಾಗೂ ಅದರ ಪಟ್ಟಿ, ತೀರ್ಪಿನ ಪ್ರತಿ, ಪ್ರಕರಣಗಳ ಸ್ಥಿತಿಗತಿ, ಸುತ್ತೋಲೆ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿರುತ್ತದೆ. ಈ ಮಾಹಿತಿ ಪಡೆಯಲು ಅಂತರ್ಜಾಲ ಸೇವೆ ಅತ್ಯಗತ್ಯ. ವೈ-ಫೈ ಸೇವೆ ಒದಗಿಸುವುದರಿಂದ ವಕೀಲರು ಕಕ್ಷೀದಾರರು ಹೈಕೋರ್ಟ್ನಲ್ಲೇ ತಮ್ಮ ಮೊಬೈಲ್, ಲ್ಯಾಪ್ಟಾಪ್ಗಳಿಗೆ ಉಚಿತ ಅಂತರ್ಜಾಲ ಸಂಪರ್ಕ ಪಡೆದು ಈ ಎಲ್ಲ ಮಾಹಿತಿ ಉಚಿತವಾಗಿ ಪಡೆಯಬಹುದು. ಅಲ್ಲದೆ ಕಾಗದ ಮುಕ್ತ ಆಡಳಿತಕ್ಕೂ ಇದು ನಾಂದಿಯಾಗಬಹುದು. ಕಾಗದ ಮುಕ್ತ ಆಡಳಿತಕ್ಕಾಗಿ ಹೈಕೋರ್ಟ್ನಲ್ಲಿ ಎರಡು ಇ-ಕೋರ್ಟ್ ಸ್ಥಾಪಿಸುವುದಾಗಿ ನ್ಯಾಯಮೂರ್ತಿಗಳು ಇತ್ತೀಚೆಗಷ್ಟೇ ತಿಳಿಸಿದ್ದರು.
ಎಲ್ಲೆಲ್ಲಿ ಅಳವಡಿಕೆ?
ಹೈಕೋರ್ಟ್ ಆವರಣದಲ್ಲಿ ಸುಮಾರು 12 ಕಡೆಗಳಲ್ಲಿ ವೈ-ಫೈ ಪೂರಕ ಸಾಧನಗಳನ್ನು ಅಳವಡಿಸಲಾಗಿದ್ದು, ವೈರ್ಲೆಸ್ ಮಾರ್ಗಗಳು ಮತ್ತು ಲಭ್ಯತಾ ಕೇಂದ್ರ (ಎಪಿ)ಗಳನ್ನು ಸ್ಥಾಪಿಸಲು ಸುಮಾರು 12ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿತ್ತು. ಆದರಂತೆ ಮಹಿಳಾ ವಕೀಲರ ಕಚೇರಿ, ನ್ಯಾಯಮೂರ್ತಿಗಳ ಗ್ರಂಥಾಲಯ, ಅಂಚೆ ಕಚೇರಿಯ ಗೇಟ್ ಮುಂಭಾಗ, ಶಾಂತಿಸಾಗರ್ ಕ್ಯಾಂಟೀನ್, ವಕೀಲರ ಸಂಭಾಂಗಣ, ವಕೀಲರ ಸಂಭಾಂಗಣ-2 ಮತ್ತು ಅದರ ಛಾವಣಿ, ವಕೀಲರ ಸಂಭಾಂಗಣ-3, ಸರ್ಕಾರಿ ವಕೀಲರ ಕೊಠಡಿಗಳು, ಶಾಂತಿಸಾಗರ ರೆಸ್ಟೋರೆಂಟ್ ಜಾಗದಲ್ಲಿ ಈ ಎಪಿಗಳನ್ನು ಸ್ಥಾಪಿಸಲಾಗಿದೆ. ಈ ಎಲ್ಲ ಎಪಿಗಳ ನಿಯಂತ್ರಣಕ್ಕೆ ಪ್ರತ್ಯೇಕ ಸರ್ವರ್ ಕೊಠಡಿ ಸ್ಥಾಪಿಸಲಾಗಿದೆ.
ವೈ-ಫೈ ಸೌಲಭ್ಯಕ್ಕಾಗಿ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಮಾಡಲಾಗಿತ್ತು. ಅವರೂ ಇದಕ್ಕೆ ಸ್ಪಂದಿಸಿದ್ದರು. ಹಾಗಾಗಿ ಸೌಲಭ್ಯ ಸಾಧ್ಯವಾಗಿದೆ. ಶೀಘ್ರವೇ ಸಿಟಿ ಸಿವಿಲ್ ಕೋರ್ಟ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲೂ ವೈ-ಫೈ ಅಳವಡಿಸಲಾಗುವುದು.
-ಎಪಿ ರಂಗನಾಥ್
ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ