ವಿಕೃತರಿಗಿನ್ನು ಕಠಿಣ ದಿನ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ತ್ವರಿತ ಗತಿಯ ನ್ಯಾಯಾಲಯ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ತ್ವರಿತ ಗತಿಯ ನ್ಯಾಯಾಲಯ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣ ವಿಲೇವಾರಿಗೆ ತ್ವರಿತ ನ್ಯಾಯಾಲಯ ಆರಂಭಿಸುವ ಕುರಿತಂತೆ ಈಗಾಗಲೇ ನಿರ್ಧಾರ ಹೊರಬಂದಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ತ್ವರಿತ ನ್ಯಾಯಾಲಯ ಆರಂಭಿಸುವ ಕುರಿತಂತೆ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಆಧರಿಸಿ ಅಂತಿಮ ಕ್ರಮ ಜರುಗಿಸಲಾಗುವುದು.
ಈ ಮೂಲಕ ವಿಕೃತ ಕಾಮಿಗಳಿಗೆ ಕಠಿಣ ಸಂದೇಶ ನೀಡಲಾಗುವುಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿ ಕಳೆದ 4 ತಿಂಗಳಿನಲ್ಲಿ ನಡೆದ 4 ಪ್ರಕರಣಗಳು ಅಮಾನವೀಯವಾಗಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರನ್ನು ಈಗಾಗಗಲೇ ಬಂಧಿಸಲಾಗಿದೆ. ಶಾಲೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಘಟನೆ ನಡೆದಿರುವುದೆಲ್ಲ ಖಾಸಗಿ ಶಾಲೆಗಳಲ್ಲಿ. ಹಾಗಂದ ಮಾತ್ರಕ್ಕೆ ಸರ್ಕಾರ ಏನು ಮಾಡಿಲ್ಲ ಎಂದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇದರ ಜತೆಗೆ ಖಾಸಗಿ ಶಾಲೆಗಳು ತಮ್ಮ ಸಿಬ್ಬಂದಿ ಮೇಲೆ ನಿಗಾ ಇಡಬೇಕು. ಸರ್ಕಾರದ ಸುರಕ್ಷತಾ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಕಡೆಗಣಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಇದಲ್ಲದೇ ಈಗಾಗಲೇ ಕೇಂಬ್ರಿಡ್ಜ್ ಹಾಗೂ ಆರ್ಕಿಡ್ಸ್ ಶಾಲೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಶಾಲೆ ಆವರಣದ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲು ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಹೆಚ್ಚವರಿ ಭದ್ರತೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ಹೇಳಿದರು. ಖಾಸಗಿ ಶಾಲೆಗಳಿಗೆ ಈಗಾಗಲೇ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಲಾಗಿದೆ ಆದರೆ ಸರ್ಕಾರಿ ಶಾಲೆಗಳಿಗೂ ಸಿಸಿಟಿವಿ ಅಳವಡಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಕಾನೂನು-ಸುವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಬೇಕು. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.
-ಡಿ.ವಿ.ಸದಾನಂದಗೌಡ, ಕೇಂದ್ರ ರೇಲ್ವೇ ಸಚಿವ