ತಪ್ಪು ಮಾಡಿದ್ದರೆ ನೇಣಿಗೇರಿಸಿ: ಮೈತ್ರಿಯಾ
ಬೆಂಗಳೂರು: ಚಿತ್ರ ನಿರ್ದೇಶಕ ರಿಷಿ ಅವರ ಆರೋಪದಲ್ಲಿ ಯಾವುದೇ ರೀತಿಯ ಸತ್ಯ ಇಲ್ಲ. ನಾನೇದಾರೂ ತಪ್ಪು ಮಾಡಿದ್ದರೆ ಸಾರ್ವಜನಿಕವಾಗಿ ನೇಣಿಗೇರಿಸಿ ಎಂದು ಮೈತ್ರಿಯಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಸೂರ್ಯ ದಿ ಗ್ರೇಟ್' ಚಿತ್ರ ಮಾಡುವಾಗ ನನ್ನ ವಯಸ್ಸು ಕೇವಲ 16 ವರ್ಷ. ಆಗ ನಾನು ಯಾವ ರೀತಿ ರಿಷಿಯನ್ನು ಮದುವೆಯಾಗಲಿ. ಚಿತ್ರೀಕರಣದ ವೇಳೆ ರಿಷಿ ಅವರು ಯಾವುದೇ ರೀತಿಯ ಕೆಟ್ಟದಾಗಿ ವರ್ತಿಸಿರಲಿಲ್ಲ. ಬಹಳ ಸ್ನೇಹಪೂರ್ವಕವಾಗಿದ್ದರು. ಬಳಿಕ ಚಿತ್ರೀಕರಣದ ಹೆಸರಲ್ಲಿ ಪದೇ ಪದೇ ನನಗೆ ಕರೆ ಮಾಡುತ್ತಿದ್ದರು. ಮಧ್ಯರಾತ್ರಿಯಲ್ಲೂ ಕರೆ ಮಾಡುತ್ತಿದ್ದರಿಂದ ನನ್ನ ತಾಯಿ ಅವರನ್ನು ಬೈದು ಮತ್ತೆ ಕರೆ ಮಾಡದಂತೆ ಎಚ್ಚರಿಕೆ ನೀಡಿದ್ದರು. ಬಳಿಕ ರಿಷಿಯನ್ನು ನಾನು ನೋಡಿಯೇ ಇರಲಿಲ್ಲ. ಆದರೆ ಈಗ ಏಕೆ ರಿಷಿ ಅವರು ಇಂತಹ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮೈತ್ರಿಯಾ ಗೌಡ ಅವರು ಹೇಳಿದ್ದಾರೆ.
ರಿಷಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಟಿ ಮೈತ್ರಿಯಾ, 'ಈತನ ಕೆಟ್ಟ ವರ್ತನೆಯಿಂದ ಬೇಸತ್ತು ನಟಿಯೋರ್ವಳು ಪತ್ರಿಕಾಗೋಷ್ಠಿಯಲ್ಲೇ ಈತನಿಗೆ ಚಪ್ಪಲಿಯಿಂದ ಹೊಡೆದಿದ್ದಳು. ಇಂತಹ ವ್ಯಕ್ತಿಯ ಮಾತನ್ನು ಕೇಳಿ ಮಾಧ್ಯಮಗಳಲ್ಲಿ ನನ್ನ ಚಾರಿತ್ರ್ಯ ವಧೆಯಾಗುತ್ತಿದೆ. ನಾನು ಈತನ ವಿರುದ್ಧ ಖಂಡಿತವಾಗಿಯೂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮೈತ್ರಿಯಾ ಹೇಳಿದ್ದಾರೆ.