ಮೈತ್ರಿಯಾ ನನ್ನ ಪತ್ನಿ: ಚಿತ್ರ ನಿರ್ದೇಶಕ ರಿಷಿ ದೂರು
ಮೈತ್ರಿಯಾ ನನ್ನ ಪತ್ನಿ: ನಿರ್ದೇಶಕ ರಿಷಿ ದೂರು
ಬೆಂಗಳೂರು: ಮೈತ್ರಿಯಾಗೌಡ ಅವರನ್ನು ನಾನು ಮದುವೆಯಾಗಿದ್ದು, ನಾಲ್ಕು ತಿಂಗಳ ಕಾಲ ಸಂಸಾರ ಕೂಡ ಮಾಡಿದ್ದೆವು ಎಂದು ಚಿತ್ರ ನಿರ್ದೇಶಕ ರಿಷಿ ಆರೋಪ ಮಾಡಿದ್ದಾರೆ.
ಕೇಂದ್ರ ರೇಲ್ವೇ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಮತ್ತು ನಟಿ ಮೈತ್ರಿಯಾ ಗೌಡ ಅವರ ವಿವಾ(ಹ)ದಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, 'ಕೊಟ್ಲಲಪ್ಪೋ ಕೈ' ಎಂಬ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಾಯಕಿಯಿಂದ ಚಪ್ಪಲಿ ಏಟು ತಿಂದ ವಿವಾದದಿಂದ (ಕು)ಖ್ಯಾತಿ ಗಳಿಸಿದ್ದ ನಿರ್ದೇಶಕ ರಿಷಿ ಇದೀಗ ನಟಿ ಮೈತ್ರಿಯಾ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಮೈತ್ರಿಯಾ ಅವರನ್ನು 2004ರಲ್ಲಿ ನಾನು ಮದುವೆಯಾಗಿದ್ದೆ. ಅಲ್ಲದೆ ನಾಲ್ಕು ತಿಂಗಳ ಕಾಲ ಸಂಸಾರ ಕೂಡ ಮಾಡಿದ್ದೆ. ಬಳಿಕ ಆಕೆ ನನ್ನ ಬಳಿ ಇದ್ದ 2 ಲಕ್ಷ ರು.ಗಳನ್ನು ಅಪಹರಿಸಿ ನಾಪತ್ತೆಯಾಗಿದ್ದಳು. ಸಾಕಷ್ಟು ಬಾರಿ ನಾನು ಆಕೆಯನ್ನು ಹುಡುಕಲು ಪ್ರಯತ್ನಿಸಿದ್ದೆ. ಆದರೆ ಆಕೆ ನನ್ನ ಕೈಗೆ ಸಿಗುತ್ತಿರಲಿಲ್ಲ ಎಂದು ನಿರ್ದೇಶಕ ರಿಷಿ ಆರೋಪಿಸಿದ್ದಾರೆ.
'ಮೈತ್ರಿಯಾಳ ನಿಜವಾದ ಹೆಸರು ಶೃತಿಗೌಡ ಎಂದು. ಈ ಹಿಂದೆ ನಾನು 'ಸೂರ್ಯ ದಿ ಗ್ರೇಟ್' ಎಂಬ ಚಿತ್ರದಲ್ಲಿ ಆಕೆಯನ್ನು ಪರಿಚಯಿಸಿದ್ದೆ. ಚಿತ್ರೀಕರಣದ ವೇಳೆಯಲ್ಲೇ ನಾನು ಆಕೆಯನ್ನು ಪ್ರೀತಿಸಿದ್ದೆ. ಬಳಿಕ ಅಂದರೆ 2004ರ ಜುಲೈ 17ರಂದು ನಾನು ಮೈತ್ರಿಯಾಳನ್ನು ಮದುವೆಯಾಗಿದ್ದೆ. ಶೇಷಾದ್ರಿಪುರಂನ ಸನ್ಮಾನ್ ಲಾಡ್ಜ್‌ನಲ್ಲಿ ನಾನು ಮತ್ತು ಮೈತ್ರಿಯಾ ಗೌಡ ಮದುವೆಯಾಗಿದ್ದೆವು. ಅಲ್ಲದೆ ಲಾಡ್ಜ್‌ನಲ್ಲಿಯೇ ನಾಲ್ಕು ತಿಂಗಳು ಸಂಸಾರ ನಡೆಸಿದ್ದೆವು. ನಂತರ ಆಕೆ ಇದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಳು. ಬಳಿಕ 2007ರಲ್ಲಿ ನನ್ನಂತೆಯೇ ಮತ್ತೋರ್ವ ಈಕೆಯಿಂದ ಹಿಂಸೆಗೆ ಒಳಗಾಗಿದ್ದ. ಉದ್ಯಮಿ ಅಂಜನ್ ಕುಮಾರ್‌ಗೆ ಹಿಂಸೆ ನೀಡಿದ್ದಳು. ಕೇವಲ ಅಂಜನ್ ಮಾತ್ರವಲ್ಲದೆ ಬೆಂಗಳೂರಿನ ಹಲವು ನಿರ್ಮಾಪಕರು ಈಕೆಯ ಹಿಂಸೆಗೆ ಒಳಗಾಗಿದ್ದಾರೆ.
ಇದೀಗ ಮೈತ್ರಿಯಾ ಮತ್ತು ಕಾರ್ತಿಕ್ ವಿವಾದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿ ನಾನು ಆಕೆಯ ಬಳಿ ನನ್ನ ಹಣವನ್ನು ವಾಪಸ್ ಕೇಳಲು ಆಕೆಯ ಮನೆಗೆ ಹೋಗಿದ್ದೆ. ಕಳೆದ ಆಗಸ್ಟ್ 27ರಂದು ನಾನು ಆಕೆಯ ಮನೆಗೆ ಹೋಗಿದ್ದೆ. ಆದರೆ ಆಕೆ ನನನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು. ನನಗೆ ಪ್ರಭಾವಿ ವ್ಯಕ್ತಿಗಳ ಮತ್ತು ರಾಜಕೀಯ ನಂಟಿದ್ದು, ತನ್ನ ಪೂರ್ವ ಜೀವನವನ್ನು ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದರು.
ಇದಾದ ಬಳಿಕ ನಾನು ಸುಮ್ಮನಾಗಿದ್ದೆ. ಆದರೆ ನಿನ್ನೆ ಮಧ್ಯಾಹ್ನ 2.30ಕ್ಕೆ 080-25994309 ದೂರವಾಣಿ ಸಂಖ್ಯೆಯಿಂದ ನನ್ನ ಮೊಬೈಲ್‌ಗೆ ಬೆದರಿಕೆ ಕರೆ ಬಂದಿತ್ತು. ಮೈತ್ರಿಯಾ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು.
ಈ ಬಗ್ಗೆ ನಾನು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಹೋಗಿದ್ದೆ. ಆದರೆ ಮೈತ್ರಿಯಾ ಹೆಸರು ಕೇಳುತ್ತಿದ್ದಂತೆಯೇ ಪೊಲೀಸರು ದೂರು ಸ್ವೀಕರಿಸಲಿಲ್ಲ. ಹೀಗಾಗಿ ನಾನು ವಕೀಲರನ್ನು ಭೇಟಿ ಮಾಡಿ ನೇರವಾಗಿ ನ್ಯಾಯಾಲಯದಲ್ಲಿಯೇ ದೂರು ಸಲ್ಲಿಸಿದ್ದೇನೆ ಎಂದು ರಿಷಿ ಹೇಳಿದ್ದಾರೆ.
8ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಟಿ ಮೈತ್ರಿಯಾ ವಿರುದ್ಧ ವಂಚನೆ, ಕೊಲೆ ಬೆದರಿಕೆ ಮತ್ತು ಕಳ್ಳತನ ಆರೋಪದಡಿ ದೂರು ದಾಖಲಿಸಲಾಗಿದೆ.