-ಶಶಿರೇಖಾ.ಜಿ.ಕೆ.
ಬೆಂಗಳೂರು: ಇದು ಗುರುಭಕ್ತಿಯಷ್ಟೇ ಅಲ್ಲ. ತಮ್ಮ ಸಾಧನೆಗೆ ಪ್ರೇರಣೆಯಾದ ಮಾದರೀ ಶಿಕ್ಷಕರಿಗೆ ಸಲ್ಲುವ ಕೃತಜ್ಞತೆಯ ಸಂಕೇತ. ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋದ ನಂತರ ಬಾಲ್ಯದಲ್ಲಿ ತಮ್ಮನ್ನು ತಿದ್ದಿತೀಡಿದ ಕೈಹಿಡಿದು ಕಾಗುಣಿತ ತಿದ್ದಿಸಿದ ಅಕ್ಕರೆಯ ಅಕ್ಷರದಾತನನ್ನು ಮರತೇಬಿಡುತ್ತಾರೆ. ನೆನಪಿಸಿಕೊಂಡರೂ ನಂತರ ಭೇಟಿಯಾಗುವ, ಸಮ್ಮಾನಿಸುವ ವ್ಯವಧಾನ ತೋರುವುದೇ ಇಲ್ಲ. ಆದರೆ ಇದಕ್ಕೆ ಅಪವಾದವಾಗಿರುವ ಅಪರೂಪದ ಘಟನೆ ಇಲ್ಲಿದೆ. ಹೈಸ್ಕೂಲ್, ಪಿಯು ಹಂತದಲ್ಲಿ ಗಣಿತ ಬೋದಿಸಿ ಜೀವನದಲ್ಲಿ ಸಾಧನೆಗೈಯಲು ಕಾರಣರಾದ ಗುರುವನ್ನು ಆತ 30 ವರ್ಷಗಳ ನಂತರ ವಿದೇಶದಿಂದ ಬಂದು ಸನ್ಮಾನಿಸಿ ನೈಜ ಗುರುಭಕ್ತಿ ಮೆರೆದಿದ್ದಾನೆ.
ವಿದೇಶದಿಂದ ಬಂದ್ರು
ಅವರ ಹೆಸರು ಎನ್.ಪಿ.ರಾಘವೇಂದ್ರರಾವ್. 30 ವರ್ಷಗಳ ಹಿಂದೆ ಭಾರತ್ ಎಲೆಕ್ಟ್ರಾನಿಕ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ವಿದ್ಯಾರ್ಥಿಗಳಿಗೆ ಗಣಿತ ಬೋಧನೆ ನಿತ್ಯದ ಕಾಯಕ. ಅವರಲ್ಲೊಬ್ಬ ವಿದ್ಯಾರ್ಥಿ ಕವಿರಾಜ್. ಆತನಿಗೆ ಗಣಿತವೆಂದರೆ ಕಬ್ಬಿಣದ ಕಡಲೆ. ಆದರೆ, ಈ ಪ್ರಾಂಶುಪಾಲರ ಗಣಿತ ಬೋಧನೆಯೇ ವಿಭಿನ್ನ. ಗಣಿತವನ್ನು ಸರಳೀಕರಿಸಿ ಬೋಧಿಸಿದ್ದೇ ಸ್ಫೂರ್ತಿ. ಇಂದು ಕವಿರಾಜ್ ಅಮೆರಿಕದ ಸಾಫ್ಟ್ವೇರ್ ಎಂಜಿನಿಯರ್. ಈ ಮಟ್ಟಕ್ಕೇರಲು ಗುರುವೇ ಕಾರಣ ಎಂಬುದು ಕವಿರಾಜ್ ನಂಬಿಕೆ.
ಅದೊಂದು ದಿನ ವ್ಯಕ್ತಿಯೊಬ್ಬರು ಕರೆ ಮಾಡಿ 30 ವರ್ಷಗಳ ಹಿಂದೆ ನಿಮ್ಮ ಶಿಷ್ಯರಾಗಿದ್ದ ಕವಿರಾಜ್ ಕ್ಯಾಲಿಫೋರ್ನಿಯಾದಿಂದ ಬೆಂಗಳೂರಿಗೆ ಬಂದು ನಿಮಗೆ ಸನ್ಮಾನ ಹಮ್ಮಿಕೊಂಡಿದ್ದಾರೆ ಎಂದಾಗ ರಾಘವೇಂದ್ರರಿಗೆ ಅಚ್ಚರಿ. ಅವರಿಗೆ ಆ ವಿದ್ಯಾರ್ಥಿಯ ಪರಿಚಯ ಫಕ್ಕನೆ ಸ್ಮೃತಿ ಪಟಲಕ್ಕೆ ನಿಲುಕಲಿಲ್ಲ. ಆಸಂದರ್ಭದಲ್ಲಿ ಅವರಿದ್ದುದು ಮಧ್ಯ ಪ್ರದೇಶದ ಇಂದೋರ್ನಲ್ಲಿ. ಇದನ್ನು ತಿಳಿಸಿದಾಗ ಅಲ್ಲಿಂದ ಬೆಂಗಳೂರಿಗೆ ಬರಲು ಏರ್ಟಿಕೇಟನ್ನೇ ಕಳುಹಿಸಿಬಿಟ್ಟರು ಕವಿರಾಜ್! ಕಾರ್ಯಕ್ರಮದ ಬಳಿಕ ಇಂದೋರ್ಗೆ ಮರಳುವ ವ್ಯವಸ್ಥೆಯನ್ನೂ ಶಿಷ್ಯನೇ ಮಾಡಿದಾಗ ಇನ್ನಷ್ಟು ಆಶ್ಚರ್ಯ.
ಎರಡು ವರ್ಷಗಳ ಶ್ರಮ
ಗುರು-ಶಿಷ್ಯರ ಬಾಂಧವ್ಯ ಹಿಂದಿನ ಹಾಗೆ ಉಳಿದಿಲ್ಲದ ಈಗಿನ ಸನ್ನಿವೇಶದಲ್ಲಿ ಇಂಥ ಭಕ್ತಿ ಮೆರೆದ ಶಿಷ್ಯನಾರು ಎಂಬ ಪ್ರಶ್ನೆ ಕೊರೆಯುತ್ತಲೇ ಇತ್ತು ಅವರಲ್ಲಿ. ಇನ್ನೂ ವಿಶೇಷವೆಂದರೆ ಶಿಷ್ಯ ತನ್ನ ಗುರುವಿನ ವಿಳಾಸ ಪತ್ತೆ ಹಚ್ಚಲು 2 ವರ್ಷ ಪ್ರಯತ್ನಿಸಿದ್ದಾರೆ. ಫೇಸ್ಬುಕ್ ಮೂಲಕ ಹಳೆಯ ಸ್ನೇಹಿತರನ್ನೆಲ್ಲ ಒಗ್ಗೂಡಿಸಿ, ಶಾಲೆಯಲ್ಲಿ ಮಾಗಿಹಿತಿ ಕಲೆ ಹಾಕಿದ್ದಾರೆ. ಕೊನೆಗೂ 150 ಶಿಷ್ಯರು ಒಟ್ಟುಗೂಡಿ ಗುರುವನ್ನು ಸನ್ಮಾನಿಸಿದ್ದು, ಮೇಸ್ಟ್ರನ್ನು ಧನ್ಯತಾ ಭಾವದಲ್ಲಿ ತೇಲಿಸಿದೆ. ಗುರುಗಳನ್ನು ಭೇಟಿಯಾದಾಗ ಕವಿರಾಜ್ ತಮ್ಮ ಹಿಂದಿನ ನೆನಪುಗಳನ್ನು ಫೋಟೋ ಮೂಲಕ ಹೆಕ್ಕಿ ಹರವಿ ಗುರುವಿಗೆ ತಾನೇ ಅವರ ಶಿಷ್ಯನೆಂದು ಮನದಟ್ಟು ಮಾಡಿಸಿದುದು ಅವಿಸ್ಮರಣೀಯ. ಪಿಯು ಹಂತದಲ್ಲಿ ಗಣಿತ ಕಲಿಯಲು ಹುರುಪು ತುಂಬಿದ್ದೇ ಅವರು 100ಕ್ಕೆ 93 ಅಂಕಗಳಿಸಲು ಕಾರಣವಾಗಿತ್ತು. ನಂತರ ಎಂಜಿನಿಯರಿಂಗ್ ಕಲಿತು ಅಮೆರಿಕದಲ್ಲಿ ನೆಲೆಸಿದ್ದಾಗಿ ಶಿಷ್ಯ ವಿನಮ್ರವಾಗಿ ನುಡಿದಿದ್ದಾಗಿ ರಾಘವೇಂದ್ರ ರಾವ್ ಹೇಳುತ್ತಾರೆ.
ಈಗ ಹಿಂದಿನ ಪರಿಸ್ಥಿತಿಯಿಲ್ಲ. ಶಿಕ್ಷಣದಲ್ಲಿ ಆಧುನಿಕ ವ್ಯವಸ್ಥೆ ಬಂದಿವೆ. ಬಹುತೇಕ ಗುರುಗಳು ಯಾಂತ್ರಿಕವಾಗಿ ಕಲಿಸುವವರೇ. ಗುರು-ಶಿಷ್ಯರ ನಡುವೆ ಬಾಂಧವ್ಯವೇ ವೃದ್ಧಿಯಾಗುವುದಿಲ್ಲ. ಇದಕ್ಕೆ ಒತ್ತಡ, ಪಾಶ್ಚಾತ್ಯ ಅನುಕರಣೆಯ ಪ್ರಭಾವವಿದ್ದಿರಬಹುದು. ಆದರೆ, ಎಲ್ಲರೂ ಹಾಗೇ ಎನ್ನಲು ಬರುವುದಿಲ್ಲ. ಗುರು-ಶಿಷ್ಯರ ಮಧುರ ಸಂಬಂಧ ವ್ಯಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸಮಾಜವೂ ಸ್ವಸ್ಥವಾಗುತ್ತದೆ ಎನ್ನುತ್ತಾರೆ ಗುರು ರಾಘವೇಂದ್ರ.
ಆಗ ಶಿಕ್ಷಕ ವೃತ್ತಿಯನ್ನು ಆದರ್ಶದ ವೃತ್ತಿ ಎಂದು ಪರಿಗಣಿಸಿದ್ದೆವು. ಎಲ್ಲ ಶಿಷ್ಯರನ್ನು ಸಮನಾಗಿ ಕಂಡು ಓದನ್ನು ನಿರ್ಲಕ್ಷಿಸುತ್ತಿದ್ದ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೆವು. ಅದನ್ನು ಮಕ್ಕಳು ಇಂದಿಗೂ ಮರೆತಿಲ್ಲ. ಮೇಷ್ಟ್ರಿಗೆ ಇದಕ್ಕಿಂತ ದೊಡ್ಡ ಕಾಣಿಕೆಯೇನು ಬೇಕು?
-ಎನ್.ಪಿ.ರಾಘವೇಂದ್ರ ರಾವ್
ನಿವೃತ್ತ ಶಿಕ್ಷಕ