ಯಾವುದೇ ಕ್ಷಣದಲ್ಲಿ ಕಾರ್ತಿಕ್ ಬಂಧನ ಸಾಧ್ಯತೆ
ನಟಿ ಮೈತ್ರಿಯಾ ಪ್ರಕರಣದ ಕುರಿತು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ವಾರಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಕಾರ್ತಿಕ್‌ನನ್ನು ಬಂಧಿಸುವ ಸಾಧ್ಯತೆ ಇದೆ.
ಬೆಂಗಳೂರು: ನಟಿ ಮೈತ್ರಿಯಾ ಪ್ರಕರಣದ ಕುರಿತು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ವಾರಂಟ್ ಜಾರಿಯಾಗಿದ್ದು, ಯಾವುದೇ ಕ್ಷಣದಲ್ಲಿ ಕಾರ್ತಿಕ್‌ನನ್ನು ಬಂಧಿಸುವ ಸಾಧ್ಯತೆ ಇದೆ.
ಈಗಾಗಲೇ ವಾರಂಟ್ ಪ್ರತಿ ಆರ್.ಟಿ.ನಗರ ಪೊಲೀಸರ ಕೈ ತಲುಪಿದ್ದು, ಕಾರ್ತಿಕ್ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಜೆ.ಸಿ.ಉಪ-ವಿಭಾಗದ ಅಧಿಕಾರಿ ಓಂಕಾರಯ್ಯ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಬೆಂಗಳೂರಿನಲ್ಲಿ ಕಾರ್ತಿಕ್‌ಗಾಗಿ ಶೋಧ ನಡೆಸಲಿದೆ. ಅಂತೆಯೇ ಮತ್ತೆರಡು ತಂಡಗಳು ಮಡಿಕೇರಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಿದೆ.
ಕಾರ್ತಿಕ್ ವಿರುದ್ಧ ಮೈತ್ರಿಯಾ ಅವರು ದೂರು ನೀಡಿದ ಬಳಿಕ ನಡೆದ ಯಾವುದೇ ವಿಚಾರಣೆಯಲ್ಲಿಯೂ ಕಾರ್ತಿಕ್ ಹಾಜರಾಗದ ಹಿನ್ನಲೆಯಲ್ಲಿ ಸೆಷನ್ಸ್ ಕೋರ್ಟ್ ಕಾರ್ತಿಕ್ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಇದಕ್ಕೂ ಮೊದಲು ಕಾರ್ತಿಕ್ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ದಾಖಲಿಸಿದ್ದರೂ, ಗುರುವಾರ ಅದರ ವಿಚಾರಣೆಯನ್ನು ನ್ಯಾಯಾಲಯ ಇಂದಿಗೆ ಮುಂದೂಡಿತ್ತು. ಇಂದು ಕಾರ್ತಿಕ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.