ಶಿಕ್ಷಕನ ನಿವೃತ್ತಿ ಕಾಣದ ನಿಸ್ವಾರ್ಥ ಸೇವೆ, ಸ್ಕಾಲರ್ಶಿಪ್ ಒದಗಿಸಲು ನೆರವು
-ಜಿತೇಂದ್ರ ಕುಂದೇಶ್ವರ
ಮಂಗಳೂರು: ಬಡ ವಿದ್ಯಾರ್ಥಿಗಳ ಪಾಲಿಗೆ ಆಪತ್ಬಾಂಧವ ಈ ನಿವೃತ್ತ ಶಿಕ್ಷಕ. ಹೆಸರು ನಾರಾಯಣ ನಾಯಕ್. ಶಾಲೆ ಕಾಲೇಜುಗಳಲ್ಲಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಸ್ಕಾಲರ್ಶಿಪ್ಗಳ ಮಾಹಿತಿ ಹೇಳಿ ಅರ್ಜಿಗಳನ್ನು ತುಂಬಿಸಿ ಕಳುಹಿಸುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.
ಎಲ್ಲರೂ ನಿವೃತ್ತಿ ಬಳಿಕ ವಿಶ್ರಾಂತ ಜೀವನದತ್ತ ಮುಖ ಮಾಡಿದರೆ ನಾಯಕ್ ನಿವೃತ್ತಿಯಾಗಿ 13 ಕಳೆದರೂ ತುಸುವೂ ಬೇಸರಿಸದೇ ನಿತ್ಯವೂ ಕನಿಷ್ಟ ಎರಡರಿಂದ ಮೂರು ಕಾಲೇಜುಗ
ಳಿಗೆ ಭೇಟಿ ನೀಡುತ್ತಾರೆ. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಬಾಕಿ ಉಳಿದ ಸಮಯದಲ್ಲಿ ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರನ್ನು ಹುಡುಕಿ ಅವರ ಹೆಸರನ್ನು ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ನೋಂದಾಯಿಸಿ, ಸೌಲಭ್ಯ ಒದಗಿಸುವ ಸೇವೆ ಮಾಡುತ್ತಿದ್ದಾರೆ.
ಬಂಟ್ವಾಳದ ಸಿದ್ದಕಟ್ಟೆ ಕರ್ಪೆಯಲ್ಲಿ ಇವರ ವಾಸ್ತವ್ಯ. ಬೆಳಗ್ಗೆ 6 ಗಂಟೆಗೆ ಎದ್ದು ಅಡಕೆ, ರಬ್ಬರ್ ತೋಟಕ್ಕೆ ತೆರಳಿ ಸ್ವಲ್ಪ ಹೊತ್ತು ಕೆಲಸ. ಮನೆಯಿಂದ 8 ಗಂಟೆಗೆ ಹೊರಟಿದರೆ ಹತ್ತು ಗಂಟೆಗೆ ಮಂಗಳೂರಿಗೆ. ಬಲ್ಮಠ ಮಹಿಳಾ ಕಾಲೇಜು, ರಥಬೀದಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚಾಗಿ ಇರುತ್ತಾರೆ. ರಾತ್ರಿ 7 ಗಂಟೆಯವರೆಗೂ ನಿರಂತರ ಕೆಲಸ. ವಿದ್ಯಾರ್ಥಿ ವೇತನ ಅರ್ಜಿ ಕೊಡುವುದು, ಚೆಕ್ ಬರೆಯೋದು ಎಲ್ಲ ಕೆಲಸ ನಾಯಕ್ ಅವರದ್ದೇ. ಕೇವಲ ಸಹಿ ಹಾಕುವ ಕೆಲಸ ವಿದ್ಯಾರ್ಥಿ ಮತ್ತು ಪ್ರಾಂಶುಪಾಲರಿಗೆ.
ಶಾಲೆಗೆ ಬರುವ ಮಕ್ಕಳನ್ನು ವಿಚಾರಿಸಿದಾಗ ಕಾರ್ಮಿಕರ ವಿವರ ಸಿಗುತ್ತದೆ. ಅವರ ಬಳಿ ಹೋಗುತ್ತೇನೆ ಅಥವಾ ಮಕ್ಕಳ ಮೂಲಕ ಅವರ ಅರ್ಜಿ ಪಡೆಯುತ್ತೇನೆ. ಕಾರ್ಮಿಕ ಕಲ್ಯಾಣ ಅಧಿಕಾರಿ ಬಳಿ ಅವರ ಹೆಸರು ನೋಂದಣಿ ಮಾಡಿಸುತ್ತೇನೆ. ನೋಂದಣಿ ಶುಲ್ಕ ಮಾತ್ರ ಪಡೆಯುತ್ತೇನೆ. ಉಳಿದ ಎಲ್ಲವೂ ಉಚಿತ. ಈ ರೀತಿ ನೋಂದಣಿ ಮಾಡಿದರೆ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗುತ್ತದೆ. ಇಬ್ಬರು ಮಕ್ಕಳ ಮದುವೆಗೆ ತಲಾ 50 ಸಾವಿರ ಸಿಗುತ್ತದೆ. ನಿವೃತ್ತಿ ವಯಸ್ಸು ತಲುಪಿದಾಗ ಪಿಂಚಣಿ ಸಿಗುತ್ತದೆ. 2 ಲಕ್ಷದ ವಿಮೆಯೂ ಇದೆ. ಮೃತಪಟ್ಟರೆ 54 ಸಾವಿರ ಹಣ ಅವಲಂಬಿತರಿಗೆ ಸಿಗುತ್ತದೆ. ಆದರೆ ಬಹುತೇಕ ಕಾರ್ಮಿಕರಿಗೆ ಇದರ ಅರಿವೇ ಇಲ್ಲ ಎನ್ನುತ್ತಾರೆ ನಾರಾಯಣ ನಾಯಕ್.
'ನಿಟ್ಟೆ ವಿವಿಯಿಂದ ಸನ್ಮಾನ ಮಾಡಿ 10 ಸಾವಿರ ಕೊಟ್ಟರು. ಅದನ್ನು ಬಡ ಅನಾಥ ಮಕ್ಕಳಿಗೆ ನೀಡಿದೆ. ಇತ್ತೀಚೆಗೆ ಒತ್ತಾಯ ಮಾಡಿ ಕೊಟ್ಟ ಹಣವನ್ನು ಕವರ್ ತೆರೆಯದೆ ವಿದ್ಯಾರ್ಥಿಯೊಬ್ಬನಿಗೆ ನೀಡಿದೆ. ಆತ ಕವರ್ ತೆಗೆದು 1 ಸಾವಿರ ಇದೆ ಎಂದು ಖುಷಿಪಟ್ಟ' ಎಂದು ನಾಯಕ್ ನಸುನಗುತ್ತಾರೆ. ಇವರಸೇವೆ ಬಗ್ಗೆ ಮೆಚ್ಚುಗೆ ಸೂಚಿಸುವ ಶಿಕ್ಷಕ ಹರೀಶ್ ಶೆಟ್ಟಿ, 'ವರ್ಷಕ್ಕೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸ್ಕಾಲರ್ಶಿಪ್ ಅರ್ಜಿ ಬರೆಸುತ್ತಾರೆ. ಪ್ರತಿ ವರ್ಷ 40ರಿಂದ 50ಲಕ್ಷದವರೆಗೆ ವಿಧ್ಯಾರ್ಥಿ ವೇತನ ಸಿಗುತ್ತದೆ. ವಿದ್ಯಾರ್ಥಿಗೆ ಹೆಚ್ಚೆಂದರೆ ವರ್ಷಕ್ಕೆ 16 ಸಾವಿರ ಸಿಗುತ್ತದೆ. ಕನಿಷ್ಟ 500 ಲಭಿಸುತ್ತದೆ. ಇವರು ವಿದ್ಯಾರ್ಥಿ ವೇತನ ಒದಗಿಸುವ ವಿದ್ಯಾರ್ಥಿಗಳಿಗೆ ಲೆಕ್ಕ ಇಲ್ಲ' ಎನ್ನುತ್ತಾರೆ.