ನಿತ್ಯಾನಂದನಿಗೆ ಅಗ್ನಿ 'ಪರೀಕ್ಷೆ'
ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ನಡೆಸಲು ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಕಲ ಸಿದ್ಥತೆ ಮಾಡಿಕೊಂಡಿದ್ದಾರೆ.
ಬೆಂಗಳೂರು: ನಿತ್ಯಾನಂದ ಸ್ವಾಮಿ ಪುರುಷತ್ವ ಪರೀಕ್ಷೆ ಕುರಿತು ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರೀಕ್ಷೆ ನಡೆಸಲು ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಕಲ ಸಿದ್ಥತೆ ಮಾಡಿಕೊಂಡಿದ್ದಾರೆ.
ಈಗಾಗಲೇ ಈ ಕುರಿತು ನಿತ್ಯಾನಂದ ಸ್ವಾಮಿಗೆ ಸಿಐಡಿ ಸಿಐಡಿ ಡಿವೈಎಸ್ಪಿ ಲೋಕೇಶ್ ಅವರು ಮೂರು ದಿನಗಳ ಹಿಂದೆಯೇ ನೋಟಿಸ್ ನೀಡಿದ್ದು, ನಾಳೆ ಖಾಲಿ ಹೊಟ್ಟೆಯಲ್ಲಿ ಆಗಮಿಸುವಂತೆ ಆದೇಶ ನೀಡಿದ್ದಾರೆ. ನಾಲ್ವರು ತಜ್ಞ ವೈದ್ಯರ ತಂಡ ನಿತ್ಯಾನಂದನ ವೈದ್ಯಕೀಯ ಪರೀಕ್ಷೆ ನಡೆಸಲಿದ್ದು, ವಿಧಿ ವಿಜ್ಞಾನ, ಮನೋ ವಿಜ್ಞಾನ, ಜನರಲ್ ಫಿಜಿಷಿಯನ್ ಮತ್ತು ಯೂರಾಲಜಿಸ್ಟ್ ತಜ್ಞರು ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.
ನಾಳೆ 9 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿತ್ಯಾನಂದನ ರಕ್ತ, ಮೂತ್ರ, ಚರ್ಮ ಮತ್ತು ರೋಮ ಸೇರಿದಂತೆ ಕೆಲ ಪ್ರಮುಖ ಅಂಗಗಳ ಪರೀಕ್ಷೆ ನಡೆಸಲಾಗುತ್ತದೆ.
ಬಿಡದಿಯಲ್ಲಿರುವ ನಿತ್ಯಾನಂದಾಶ್ರಮದಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಮೇರೆಗೆ ನಿತ್ಯಾಂದನನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಅಲ್ಲದೆ ತಾನು ಗಂಡಸೂ ಅಲ್ಲ, ಹೆಂಗಸೂ ಅಲ್ಲ. ಹೀಗಾಗಿ ನನಗೆ ಲೈಂಗಿಕ ಕ್ರಿಯೆ ನಡೆಸುವ ಸಾಮರ್ಥ್ಯವಿಲ್ಲ ಎಂದು ನಿತ್ಯಾನಂದ ಹೇಳಿದ್ದು, ಅದನ್ನು ಖಚಿತಪಡಿಸಿಕೊಳ್ಳಲು ಪರೀಕ್ಷೆ ಅನಿವಾರ್ಯ ಎಂದು ಸರ್ಕಾರದ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದ್ದರು.