ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಡಿವಿಎಸ್ ಪುತ್ರ ಕಾರ್ತಿಕ್ ಗೆ ಷರತ್ತುಬದ್ದ ಜಾಮೀನು

ಬಂಧನ ಭೀತಿ ಎದುರಿಸುತ್ತಿದ್ದ ಕಾರ್ತಿಕ್ ಗೌಡ ಅವರಿಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Srinivasa Murthy VN
Updated On : 8 Sept 2014, 6:13 am

ಬೆಂಗಳೂರು: ಕಾರ್ತಿಕ್-ಮೈತ್ರಿ ವಿವಾ(ಹ)ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿದ್ದ ಕಾರ್ತಿಕ್ ಗೌಡ ಅವರಿಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಜಿ.ಬಿ ಮುದಿಗೌಡರ್ ಅವರು ಷರತ್ತುಬದ್ಧ ಜಾಮೀನು ನೀಡಿದ್ದಾರೆ. 2 ಲಕ್ಷ ಭದ್ರತಾ ಠೇವಣಿ ಮತ್ತು ಇಬ್ಬರ ಶ್ಯೂರಿಟಿ ನೀಡಿ ಜಾಮೀನು ಪಡೆಯಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಬಿಟ್ಟು ತೆರಳದಂತೆಯೂ ಮತ್ತು ಶೀಘ್ರದಲ್ಲಿಯೇ ಪೊಲೀಸರ ವಿಚಾರಣೆಗೆ ಸಹಕರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ. ಷರತ್ತುಗಳ ಉಲ್ಲಂಘನೆಯಾದರೆ ಕಾರ್ತಿಕ್ ಗೌಡ ಅವರನ್ನು ಬಂಧಿಸಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರುತ್ತೇವೆ: ಮೈತ್ರಿಯಾ ಪರ ವಕೀಲ
ಕಾರ್ತಿಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಕುರಿತು ಪ್ರತಿಕ್ರಿಯಿಸಿರುವ ಮೈತ್ರಿಯಾ ಗೌಡ ಪರ ವಕೀಲ ಆಕರ್ಷ್ ಅವರು, ಕಾರ್ತಿಕ್ ಗೌಡ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಕಾರ್ತಿಕ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈಗಲಾದರೂ ಕಾರ್ತಿಕ್ ವಿಚಾರಣೆಗೆ ಹಾಜರಾಗಬೇಕಿದೆ. ನ್ಯಾಯಾಲಯದ ಆದೇಶದ ಪ್ರತಿ ತಮಗಿನ್ನೂ ದೊರೆತಿಲ್ಲ. ಆದರೆ ಕಾರ್ತಿಕ್‌ಗೆ ನ್ಯಾಯಾಲಯ ಕೆಲ ಪ್ರಮುಖ ಷರತ್ತುಗಳನ್ನು ವಿಧಿಸಿದ್ದು, 2 ಲಕ್ಷ ಬಾಂಡ್ ಮತ್ತು ಇಬ್ಬರ ಶೂರಿಟಿ ಕೇಳಿದೆ. ಅಲ್ಲದೆ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಪ್ರತಿ ತಿಂಗಳ 15 ಮತ್ತು 30ನೇ ತಾರೀಖಿನಂದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕಿದೆ. ಅಲ್ಲದೆ ಕರ್ನಾಟಕ ರಾಜ್ಯ ಬಿಟ್ಟು ತೆರಳದಂತೆ ಮತ್ತು ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ 'ನಮ್ಮ ವಾದಕ್ಕೆ ಹಿನ್ನಡೆಯಾಗಿಲ್ಲ. ಸೆಷನ್ಸ್ ನ್ಯಾಯಾಲದ ಆದೇಶವನ್ನು ನಾವು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಬುಧವಾರ ಹೈಕೋರ್ಟ್‌ನಲ್ಲಿ ಈ ಸಂಬಂಧ ಅರ್ಜಿಯನ್ನು ಸಲ್ಲಿಸುತ್ತೇವೆ' ಎಂದು ಮೈತ್ರಿಯಾ ಪರ ವಕೀಲ ಆಕರ್ಷ್ ಹೇಳಿದ್ದಾರೆ.

ಕಾರ್ತಿಕ್ ಗೌಡ ತಮ್ಮನ್ನು ವಿವಾಹವಾಗಿದ್ದು, ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಅವರಿಗೆ ಸಮನ್ಸ್ ಕೂಡ ನೀಡಿದ್ದರು. ಆದರೆ ಕಾರ್ತಿಕ್ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement