ನಿತ್ಯಾನಂದನ ಧ್ವನಿ ಪರೀಕ್ಷೆ ಪೂರ್ಣ
ದೂರುದಾರರಿಗೆ ಬೆದರಿಕೆ ಹಾಕಿದ ಪ್ರಕರಣದ ಮೇರೆಗೆ ನಿತ್ಯಾನಂದ ಸ್ವಾಮಿ ಧ್ವನಿ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆ ಬಳಿಕ ನಿತ್ಯಾನಂದ ಸ್ವಾಮಿಯನ್ನು ಬಿಡದಿ ಆಶ್ರಮಕ್ಕೆ ಕರೆದೊಯ್ಯಲಾಗಿದೆ.
ಬೆಂಗಳೂರು: ದೂರುದಾರರಿಗೆ ಬೆದರಿಕೆ ಹಾಕಿದ ಪ್ರಕರಣದ ಮೇರೆಗೆ ನಿತ್ಯಾನಂದ ಸ್ವಾಮಿ ಧ್ವನಿ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆ ಬಳಿಕ ನಿತ್ಯಾನಂದ ಸ್ವಾಮಿಯನ್ನು ಬಿಡದಿ ಆಶ್ರಮಕ್ಕೆ ಕರೆದೊಯ್ಯಲಾಗಿದೆ.
ಮಡಿವಾಳದಲ್ಲಿರುವ ಎಫ್ಎಸ್ಎಲ್ ಕೇಂದ್ರದಲ್ಲಿ ನಿತ್ಯಾನಂದನ ಧ್ವನಿ ಪರೀಕ್ಷೆ ಮಾಡಲಾಗಿದ್ದು, ತಜ್ಞರಾದ ಶ್ರೀವಿದ್ಯಾ ಅವರ ನೇತೃತ್ವದ ತಂಡ ಧ್ವನಿ ಪರೀಕ್ಷೆಯನ್ನು ಪೂರ್ಣಗೊಳಿಸಿದೆ. ಪರೀಕ್ಷೆ ಬಳಿಕ ನಿತ್ಯಾನಂದ ಸ್ವಾಮಿಯನ್ನು ಆ್ಯಂಬುಲೆನ್ಸ್ ಮೂಲಕ ಆಶ್ರಮಕ್ಕೆ ಕಳುಹಿಸಿಕೊಡಲಾಗಿದೆ.
ಬಿಡದಿ ಆಶ್ರಮದಲ್ಲಿ ಮಹಿಳಾ ಭಕ್ತರನ್ನು ಲೈಂಗಿಕವಾಗಿ ಬಳಸಿಕೊಂಡ ಕುರಿತು ದೂರು ದಾಖಲಿಸಿದ್ದ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಗೆ ನಿತ್ಯಾನಂದ ಸ್ವಾಮಿ ದೂರವಾಣಿ ಕರೆ ಮಾಡುವ ಮೂಲಕ ಬೆದರಿಕೆ ಹಾಕಿದ್ದು, ಈ ಬಗ್ಗೆ ಸ್ವತಃ ದೂರುದಾರ ಲೆನಿನ್ ಕುರುಪ್ಪನ್ ಅವರು ದೂರು ದಾಖಲಿಸಿದ್ದರು. ಅಲ್ಲದೆ ನಿತ್ಯಾನಂದ ಬೆದರಿಕೆ ಹಾಕಿದ್ದ ಕಾಲ್ ರೆಕಾರ್ಡ್ ದಾಖಲೆಯನ್ನು ಪೊಲೀಸರಿಗೆ ನೀಡಿದ್ದರು.
ಹೀಗಾಗಿ ಇಂದು ನಡೆದ ಧ್ವನಿ ಪರೀಕ್ಷೆಯ ವರದಿಯನ್ನು ಕುರುಪ್ಪನ್ ನೀಡಿದ್ದ ದೂರವಾಣಿ ರೆಕಾರ್ಡ್ನೊಂದಿಗೆ ಹೋಲಿಕೆ ಮಾಡಿ ಧ್ವನಿ ನಿತ್ಯಾನಂದನದ್ದೇ? ಅಥವಾ ಅಲ್ಲವೇ ಎಂದು ಪರೀಕ್ಷಿಸಲಾಗುತ್ತದೆ. ಬಳಿಕ ಈ ವರದಿಯನ್ನು ಸಿಐಡಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದರ ಆಧಾರದ ಮೇಲೆ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ನೀಡಲಿದ್ದಾರೆ.
ಪರೀಕ್ಷೆಗೆ ಸ್ಪಂದಿಸದ ನಿತ್ಯಾನಂದ
ತಜ್ಞರಾದ ಶ್ರೀವಿದ್ಯಾ ಅವರ ತಂಡ ನಿತ್ಯಾನಂದನನ್ನು ಧ್ವನಿ ಪರೀಕ್ಷೆಗೆ ಒಳಪಡಿಸಿದ್ದರೆ, ಆತ ಮಾತ್ರ ಪರೀಕ್ಷೆಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಪರೀಕ್ಷೆ ವೇಳೆ ಉದ್ದೇಶಪೂರ್ವಕವಾಗಿಯೇ ತೊದಲುನುಡಿಯ ಮೂಲಕ ತಜ್ಞರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದನು ಎಂದು ತಿಳಿದುಬಂದಿದೆ. ಹೀಗಾಗಿ ಧ್ವನಿಪರೀಕ್ಷೆ ದೀರ್ಘಾವಧಿಯವರೆಗೆ ಮುಂದುವರೆದುಕೊಂಡು ಹೋಯಿತು ಎಂದು ಮೂಲಗಳು ತಿಳಿಸಿವೆ.