ಮೈತ್ರಿಯಾ ಹೇಳಿಕೆಯಿಂದ ಕಾರ್ತಿಕ್ಗೆ ಜಾಮೀನು?
ವಿವಾ(ದ)ಹ ಪ್ರಕರಣದಲ್ಲಿ ಮೈತ್ರಿಯಾ ಹೇಳಿಕೆಯಿಂದಲೇ ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು ಮಂಜೂರಾಯಿತು ಎಂದು ಹೇಳಲಾಗುತ್ತಿದೆ.
ಬೆಂಗಳೂರು: ವಿವಾ(ದ)ಹ ಪ್ರಕರಣದಲ್ಲಿ ಮೈತ್ರಿಯಾ ಹೇಳಿಕೆಯಿಂದಲೇ ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು ಮಂಜೂರಾಯಿತು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದ ಆರ್.ಟಿ.ನಗರ ಪೊಲೀಸರ ಬಳಿ ಹೇಳಿಕೆ ನೀಡಿದ್ದ ನಟಿ ಮೈತ್ರಿಯಾ, ಮಂಗಳೂರಿನ ಮನೆಗೆ ಕರೆದೊಯ್ದ ಕಾರ್ತಿಕ್ ತಮಗೆ ಅರಿಶಿಣ ಕೊಂಬಿನಿಂದ ಮಾಡಿದ ತಾಳಿಯನ್ನು ಕಟ್ಟಿದ್ದರು. ಬಳಿಕ ತಮ್ಮ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಹೇಳಿಕೆ ನೀಡಿದ್ದರು.
ಇದೇ ಅಂಶವನ್ನು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದ ಕಾರ್ತಿಕ್ ಗೌಡ ಪರ ವಕೀಲರು, ಮದುವೆಯಾದ ಬಳಿಕ ತಾಳಿಕಟ್ಟಿದಾತ ಗಂಡನಾಗುತ್ತಾನೆ. ಹೀಗಾಗಿ ಮೈತ್ರಿಯಾ ಗೌಡ ಅವರ ಆರೋಪದಲ್ಲಿಯೇ ಗೊಂದಲವಿದ್ದು, ಅತ್ಯಾಚಾರ ಆರೋಪದಲ್ಲಿ ಹುರುಳಿಲ್ಲ ಎಂದು ವಾದಿಸಿದ್ದರು. ಅಂತೆಯೇ ಆಕೆಯೇ ತನ್ನ ಸ್ವಂತ ನಿರ್ಧಾರದಿಂದ ವಿಮಾನದ ಮೂಲಕವಾಗಿ ಮಂಗಳೂರಿಗೆ ತೆರಳಿದ್ದು, ಒಬ್ಬಂಟಿಯಾಗಿಯೇ ವಾಪಸಾಗಿದ್ದಾಳೆ. ಈ ಬಗ್ಗೆ ದಾಖಲೆಗಳಿದ್ದು, ಈ ವಿಚಾರವನ್ನು ಸ್ವತಃ ಮೈತ್ರಿಯಾ ಅವರೇ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ವಕೀಲರು ಹೇಳಿದ್ದರು.
ಅಲ್ಲದೆ ಪೊಲೀಸರ ಬಳಿ ಮೈತ್ರಿಯಾ ನೀಡಿದ್ದ ಹೇಳಿಕೆಗಳಿಗೂ ಮತ್ತು ಅವರು ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆಗಳಿಗೂ ತಾಳೆಯಾಗುತ್ತಿಲ್ಲ. ಅವರ ಹೇಳಿಕೆಗಳು ಹಲವು ಗೊಂದಲಗಳಿಂದ ಕೂಡಿದ್ದು, ಅವರ ಮಾತಿನಲ್ಲಿ ಸ್ಪಷ್ಟತೆ ಇಲ್ಲ ಎಂದು ವಾದ ಮಂಡಿಸಿದ್ದರು.
ಹೀಗಾಗಿ ಮೈತ್ರಿಯಾಗೌಡ ಅವರ ಅಸ್ಪಷ್ಟ ಹೇಳಿಕೆಗಳೂ ಕೂಡ ಕಾರ್ತಿಕ್ ಗೌಡ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಲು ಪರೋಕ್ಷ ನೆರವಾಯಿತು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ: ಮೈತ್ರಿಯಾ
ಕಾರ್ತಿಕ್ ಗೌಡ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾದ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ನಟಿ ಮೈತ್ರಿಯಾ ಗೌಡ ಅವರು, ಘನ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ತಾವು ಇಂದಿಗೂ ಕಾರ್ತಿಕ್ ಗೌಡ ಅವರನ್ನು ಪ್ರೀತಿಸುತ್ತಿದ್ದು, ನ್ಯಾಯಕ್ಕಾಗಿ ನನ್ನ ಕಾನೂನು ಹೋರಾಟವನ್ನು ಮುಂದುವೆರಿಸುತ್ತೇನೆ ಎಂದು ಹೇಳಿದ್ದಾರೆ.
ಕಾರ್ತಿಕ್ ಗೌಡ ತಮ್ಮನ್ನು ವಿವಾಹವಾಗಿದ್ದು, ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಡಿವಿಎಸ್ ಪುತ್ರ ಕಾರ್ತಿಕ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಪ್ರಕರಣಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ ಅವರಿಗೆ ಸಮನ್ಸ್ ಕೂಡ ನೀಡಿದ್ದರು. ಆದರೆ ಕಾರ್ತಿಕ್ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ವಾರಂಟ್ ಜಾರಿ ಮಾಡಲಾಗಿತ್ತು.