ಬೆಂಗಳೂರು: ಮೈತ್ರಿಯಾ ವಿವಾ(ದ)ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಗೌಡ ಅವರ ಪೊಲೀಸ್ ವಿಚಾರಣೆ ಅಂತ್ಯವಾಗಿದ್ದು, ಮೈತ್ರಿಯಾಳನ್ನು ನಾನು ಮದುವೆಯಾಗಿಲ್ಲ ಎಂದು ಕಾರ್ತಿಕ್ ಪುನರುಚ್ಛರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ನಡೆಯುತ್ತಿರುವ ವಿಚಾರಣೆ ಇಂದು ಕೂಡ ಮುಂದುವರೆದಿದ್ದು, ಕಾರ್ತಿಕ್ ಇಂದು ಸುಮಾರು 70 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. ಎಸಿಪಿ ಓಂಕಾರಯ್ಯ ಅವರ ಆರ್.ಟಿ.ನಗರದ ಕಚೇರಿಯಲ್ಲಿಯೇ ಕಾರ್ತಿಕ್ ವಿಚಾರಣೆ ನಡೆದಿದ್ದು, ಸತತ 7 ಗಂಟೆಗಳ ಕಾಲ ಕಾರ್ತಿಕ್ ಗೌಡ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಕಾರ್ತಿಕ್ ನಿನ್ನೆ ನೀಡಿದ್ದ ಉತ್ತರಗಳನ್ನೇ ಇಂದು ಪುನರುಚ್ಛರಿಸಿದ್ದು, ನಾನು ಮೈತ್ರಿಯಾಳನ್ನು ಮದುವೆಯಾಗಿಲ್ಲ ಎಂದು ಮತ್ತೆ ಒತ್ತಿ ಹೇಳಿದ್ದಾರೆ. ಅಲ್ಲದೆ ಮೈತ್ರಿಯಾ ನಾನು ಮಂಗಳೂರಿನಲ್ಲಿ ಮದುವೆಯಾಗಿದ್ದೇನೆ ಎಂದು ಆರೋಪಿಸಿದ್ದಾಳೆ. ಆದರೆ ಆ ದಿನ ಅಂದರೆ ದಿನಾಂಕ 4 ಮತ್ತು 5ರಂದು ನಾನು ಮಂಗಳೂರಿನಲ್ಲಿ ಇರಲಿಲ್ಲ. ಬೆಂಗಳೂರಿನಲ್ಲಿಯೇ ಇದ್ದೆ. ಹೀಗಿರುವಾಗ ಮದುವೆಯಾಗಲು ಹೇಗೆ ಸಾಧ್ಯ..? ಅಲ್ಲದೆ ನಮ್ಮ ಸಂಸ್ಕೃತಿಯಲ್ಲಿ ಅರಿಶಿಣಕೊಂಬನ್ನು ಕಟ್ಟುವ ಸಂಪ್ರದಾಯವೇ ಇಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ಕಾರ್ತಿಕ್ ಹೇಳಿಕೆಯನ್ನು ಪರಿಶೀಲಿಸಿರುವ ಪೊಲೀಸರು, ಈಗಾಗಲೇ ಕಾರ್ತಿಕ್ ಅವರ ಮೊಬೈಲ್ ಟವರ್ ಲೊಕೇಶನ್ ಅನ್ನು ಪತ್ತೆ ಮಾಡಿದ್ದು, ಅಂದು ಕಾರ್ತಿಕ್ ಬೆಂಗಳೂರಿನಲ್ಲಿಯೇ ಇದ್ದ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಕಾರ್ತಿಕ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ನ್ಯಾಯಾಲಯದಲ್ಲಿ ಅಗತ್ಯ ಬಿದ್ದರೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ಕಾರ್ತಿಕ್ ವಿಚಾರಣೆ ಅವಶ್ಯಕತೆ ಇದ್ದರೆ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ 10.15ಕ್ಕೆ ಆರ್.ಟಿ.ನಗರ ಪೊಲೀಸ್ ಠಾಣೆಗೆ ಆಗಮಿಸಿದ ಕಾರ್ತಿಕ್ ಗೌಡ ಅವರನ್ನು ಪೊಲೀಸರು ಸತತ ವಿಚಾರಣೆಗೆ ಒಳಪಡಿಸಿದ್ದರು. ಊಟಕ್ಕಾಗಿ ಮಧ್ಯಾಹ್ನ 12.30ಕ್ಕೆ ಅರ್ಧಗಂಟೆ ವಿರಾಮ ನೀಡಿದ್ದನ್ನು ಹೊರತು ಪಡಿಸಿದರೆ ಬಳಿಕ ಸತತ 7 ಗಂಟೆಗಳ ಕಾರ್ತಿಕ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಪೊಲೀಸರು ಸುಮಾರು 50ರಿಂದ 70 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.