ಹುಬ್ಬಳ್ಳಿ: ರಾಯಚೂರು, ಧಾರವಾಡ ಅಥವಾ ಮೈಸೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಕೇಂದ್ರದ ತಂಡ ಪರಿಶೀಲಿಸಿ, ಸೂಕ್ತ ಸ್ಥಳ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿ ಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆಯಾಗ ಬೇಕೆಂದು ತೀರ್ಮಾನಿಸಲಾಗಿತ್ತು. ನಾವು ಬೇರೆ ರಾಗ ಎಳೆಯಲಾಗದು. ರಾಜ್ಯದ ಇತರ ಜಿಲ್ಲೆಗಳಿಂದಲೂ ಐಐಟಿಗಾಗಿ ಬೇಡಿಕೆ ಬಂದಿದೆ. ಧಾರವಾಡ, ರಾಯಚೂರು ಹಾಗೂ ಮೈಸೂರು ಜಿಲ್ಲೆಗಳನ್ನು ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಕೇಂದ್ರ ತಂಡ ಈ ಜಿಲ್ಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್ ಪ್ರಭಾವ ಬಳಸಲಿ. ಮೈಸೂರಿಗೇ ಐಐಟಿ ಕೊಡಿ ಎಂದು ನಾನಂತೂ ಕೇಳಲ್ಲ. ಕರ್ನಾಟಕದ ಯಾವ ಭಾಗಕ್ಕೆ ಐಐಟಿ ಕೊಟ್ಟರೂ ನನ್ನ ವಿರೋಧವಿಲ್ಲ ಎಂದು ಹೇಳಿದರು.