ಬೆಂಗಳೂರು: ವಿದ್ಯಾರ್ಥಿನಿ ಗೌತಮಿ ಹತ್ಯೆಗೆ ಆರೋಪಿ ಮಹೇಶ್ ಬಳಸಿದ್ದ ಪಿಸ್ತೂಲಿನ ಮೂಲ ಕೊನೆಗೂ ಪತ್ತೆಯಾಗಿದೆ. ಆಗುಂಬೆ ನಂತರ ಆತ ಬಾಯ್ಬಿಟ್ಟಂತೆ ಬಿಹಾರ ಮೂಲದ ವ್ಯಕ್ತಿಯಿಂದಲೇ ಪಿಸ್ತೂಲು ಖರೀದಿಸಿದ್ದು ಖಚಿತವಾಗಿದೆ.
ಈ ಪ್ರಕರಣವನ್ನು ಸವಾಲಾಗಿಯೇ ತೆಗೆದುಕೊಂಡಿದ್ದ ಕಾಡುಗೋಡಿ ಪೊಲೀಸರು, ಮಹೇಶ್‍ನನ್ನು ಬಿಹಾರಕ್ಕೆ ಕರೆದೊಯ್ದು ಅದರ ಮೂಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಹೇಶ್‍ಗೆ ಪಿಸ್ತೂಲು ಮಾರಾಟ ಮಾಡಿರುವ ಬಿಹಾರದ ಮುಂಗೂರು ಜಿಲ್ಲೆಯ ವ್ಯಕ್ತಿಯನ್ನು ಪತ್ತೆಹಚ್ಚಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇನ್ಸ್‍ಪೆಕ್ಟರ್ ಪ್ರಶಾಂತ್ ನೇತೃತ್ವದ ತನಿಖಾ ತಂಡ ಆರೋಪಿ ಮಹೇಶನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿತ್ತು.
ಬಿಹಾರದಲ್ಲಿರುವ ಪೊಲೀಸ್ ಮಾಹಿತಿದಾರರ ಮುಖಾಂತರ ಮಹೇಶ್ ಹೇಳಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ಆತ ಅಕ್ರಮವಾಗಿ ದೇಸಿ ಪಿಸ್ತೂಲು ಮಾರಾಟ ಮಾಡುತ್ತಾನೆ ಎನ್ನುವುದನ್ನು ತನಿಖಾ ತಂಡ ಖಚಿತಪಡಿಸಿಕೊಂಡಿದೆ. ಮುಂಗೂರು ಜಿಲ್ಲೆಯ ವ್ಯಕ್ತಿ. ಮಹೇಶನಿಗೆ ಕೆ.ಆರ್. ಪುರಂನಲ್ಲಿ ಪರಿಚಯವಾಗಿದ್ದ. ಆಗ ಅಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಮಹೇಶ್ ಕೆಲಸಕ್ಕಿದ್ದ. ಮಹೇಶ್ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಈತ ಕೂಡಾ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ. ಆಗ ಇಬ್ಬರಿಗೂ ಹೆಚ್ಚು ಪರಿಚಯವಾಗಿತ್ತು. ಮಹೇಶ್ ಪಿಸ್ತೂಲ್ ಮೋಹ ಅರಿತಿದ್ದ ಈತ ಅದನ್ನೇ ಬಂಡವಾಳವಾಗಿಸಿಕೊಂಡು ಪಿಸ್ತೂಲಿನ ವಿಚಾರವೆತ್ತಿದ್ದ. ದುಡ್ಡು ಕೊಟ್ಟರೆ ತಾನೇ ತಂದು ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದ ನಂತರ ಆತ, ಮಹೇಶ್ ರು.6 ಸಾವಿರಕ್ಕೆ ಪಿಸ್ತೂಲು ಖರೀದಿಸಿದ್ದ. ಹೀಗೆ ಪಿಸ್ತೂಲು ಕೊಟ್ಟವನು ಐದಾರು ತಿಂಗಳಲ್ಲಿಯೇ ಬಿಹಾರಕ್ಕೆ ಹಾರಿದ್ದ.
ಖರೀದಿಸಿದವನು ಅಡಗಿಸಿಟ್ಟಿದ್ದ
ಹೀಗೆ ಪಿಸ್ತೂಲು ಖರೀದಿಸಿದ್ದ ಮಹೇಶ್ 4 ವರ್ಷಗಳ ಕಾಲ ತನ್ನ ಅಕ್ಕನ ಮನೆಯಲ್ಲಿ ಭದ್ರವಾಗಿ ಬಚ್ಚಿಟ್ಟಿದ್ದ. ಆದರೆ, ಪ್ರಗತಿ ಹಾಸ್ಟೆಲಿನ ವಿದ್ಯಾರ್ಥಿನಿಯರು ಅವಮಾನಿಸಿದಾಗ ಆತ ರೊಚ್ಚಿಗೆದ್ದು, ಬಚ್ಚಿಟ್ಟಿದ್ದ ಪಿಸ್ತೂಲು ಹೊರತೆಗೆದು ಯುವತಿ ಗೌತಮಿ ಮೇಲೆ ಗುಂಡು ಹಾರಿಸಿದಾಗಲೇ ಆತ ಪಿಸ್ತೂಲು ಹೊಂದಿದ್ದು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಪ್ರಕರಣದ ತನಿಖೆಯ ಹೆಚ್ಚಿನ ಮಾಹಿತಿ ಕುರಿತು ಪೊಲೀಸರು ಮಾಹಿತಿ ನೀಡಲು ಸಿದ್ಧರಿಲ್ಲ. ತನಿಖಾ ತಂಡ ಇನ್ನೆರಡು ದಿನಗಳಲ್ಲಿ ಬೆಂಗಳೂರಿಗೆ ಮರಳಲಿದೆ. ನಂತರವೇ ತನಿಖೆಯ ಪ್ರಗತಿಯ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿಗಳು ಸಿಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ವರ್ಷದ ಹಿಂದೆಯೇ ತಂದಿದ್ದ
ಆರೋಪಿ ಮಹೇಶ್, ಬಿಹಾರ ಮೂಲದ ವ್ಯಕ್ತಿಯಿಂದಲೇ ಪಿಸ್ತೂಲು ಖರೀದಿಸಿದ್ದು, ಖಚಿತವಾದ ನಂತರ ಆತ ಹಣ ಕೊಟ್ಟು ಅದನ್ನು ಏಕೆ ಖರೀದಿಸಿದ? ಯಾರಿಗೂ ಗೊತ್ತಾಗದಂತೆ ಅದನ್ನು ರಹಸ್ಯವಾಗಿ ಬಚ್ಚಿಟ್ಟುಕೊಂಡಿದ್ದರ ಅಚ್ಚರಿ ಸಂಗತಿಗಳು ಬಯಲಾಗತೊಡಗಿವೆ. ಮಹೇಶ್‍ನಿಗೆ ನಾಲ್ಕು ವರ್ಷಗಳ ಹಿಂದೆ ಈ ಪಿಸ್ತೂಲನ್ನು ಬಿಹಾರದಿಂದ ಉದ್ಯೋಗ ಅರಸಿ ಬಂದಿದ್ದ ಮಗೇರ್
ಜಿಲ್ಲೆಯ ವ್ಯಕ್ತಿಯೊಬ್ಬ ಮಾರಾಟ ಮಾಡಿದ್ದ. ಮಲೆನಾಡು ಮೂಲದ ಮಹೇಶ್‍ನಿಗೆ ಬಾಲ್ಯದಿಂದಲೂ ಬಂದೂಕುಗಳ ಖಯಾಲಿ ಇತ್ತು. ಅಲ್ಲಿ ತೋಟಗಳಿಗೆ ಬರುವ ಮಂಗಗಳನ್ನು ಓಡಿಸಲು ಬಳಸುವ ನಾಡ ಪಿಸ್ತೂಲುಗಳ ಬಳಕೆಯನ್ನು ನೋಡಿದವನು ತಾನೂ ಕೂಡ ಅಂತಹದ್ದೊಂದು `ಹತ್ಯಾರ್' ಹೊಂದಬೇಕೆಂದು ಕೆಲವರ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಈ ಹೊತ್ತಿಗೆ ಆತನಿಗೆ ಸಿಕ್ಕವನು ಈ ಬಿಹಾರದ ವ್ಯಕ್ತಿ.
ತನಿಖೆಗಾಗಿ ಒಂದು ತಂಡ ಆರೋಪಿಯನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದೆ. ಅಲ್ಲಿ ಒಂದಷ್ಟು ಪ್ರಗತಿ ಸಿಕ್ಕಿದೆ. ಆ ತಂಡ ಮರಳಿದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ತನಿಖೆ ಪೂರ್ಣಗೊಳ್ಳಲು ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ.
-ಹರಿಶೇಖರನ್
ಹೆಚ್ಚುವರಿ ಪೊಲೀಸ್ ಆಯುಕ್ತ