ಬೆಂಗಳೂರು: ರಸ್ತೆ ಸಾರಿಗೆ ಸುರಕ್ಷತಾ ವಿಧೇಯಕ ವಿರೋಧಿಸಿ ಸಾರಿಗೆ ಸಂಸ್ಥೆಗಳು ನಡೆಸುತ್ತಿದ್ದ ಮುಷ್ಕರದಿಂದಾಗಿ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್ ಗಳ ಸೇವೆಯನ್ನು ಮತ್ತೆ ಪುನಾರಂಭ ಮಾಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರ ಪುನಾರಂಭಗೊಂಡಿದೆ. ಆದರೆ ಕೆಲ ಆಯ್ದ ಪ್ರದೇಶಗಳಿಗೆ ಮಾತ್ರ ಬಸ್ ಸಂಚಾರ ಪುನಾರಂಭ ಮಾಡಲಾಗಿದ್ದು, ಪ್ರಯಾಣಿಕರ ದಟ್ಟಣೆಯನ್ನು ನೋಡಿಕೊಂಡು ಬಸ್ ಸಂಖ್ಯೆಗಳನ್ನು ಹೆಚ್ಚಿಸುವುದಾಗಿ ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಉದ್ದೇಶಿತ ರಸ್ತೆ ಸಾರಿಗೆ ಸುರಕ್ಷತಾ ವಿಧೇಯಕ ವಿರೋಧಿಸಿ ಸಾರಿಗೆ ಸಂಸ್ಥೆಗಳು ನಡೆಸುತ್ತಿದ್ದ ಒಂದು ದಿನದ ಮುಷ್ಕರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ದೇಶದ ಪ್ರಮುಖ ನಗರಗಳಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆ ಬಹುತೇಕ ಸ್ಥಬ್ದವಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಸ್ಸು ಹಾಗೂ ಆಟೋರಿಕ್ಷಾಗಳು ಬಂದ್ ಭಾಗವಹಿಸಿದ್ದ ಕಾರಣ ಜನಜೀವನ ಅಸ್ಯವ್ಯಸ್ತಗೊಂಡಿತ್ತು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಮಾತ್ರ ಅಷ್ಟೇನೂ ವ್ಯತ್ಯಯವಾದಂತೆ ಕಂಡುಬರಲಿಲ್ಲ. ಸರ್ಕಾರಿ ನೌಕರರು ಸೇರಿದಂತೆ ಕಛೇರಿ ಹಾಗೂ ಇತರೆಡೆ ಕೆಲಸಗಳಿಗೆ ಹೋಗುವ ಜನರು, ಸಾರಿಗೆ ಸೇವೆ ಇಲ್ಲದೆ ತೊಂದರೆ ಅನುಭವಿಸಿದರು.
ದೇಶಾದ್ಯಂತ 54 ಸಾರಿಗೆ ನಿಗಮಗಳು ಸಾರಿಗೆ ಬಂದ್‌ಗೆ ಬೆಂಬಲ ನೀಡಿದ್ದು, ವಿವಿಧ ಆಟೋರಿಕ್ಷಾ ಸಂಘಟನೆಗಳೂ ಕೈಜೋಡಿಸಿದ್ದರಿಂದ ಬಂದ್ ಬಹುತೇಕ ಯಶಸ್ವಿಯಾಗಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ತುಮಕೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದ ವಿವಿಧೆಡೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದವು. ದೇಶದ ಪ್ರಮುಖ ನಗರಗಳಲ್ಲಿ ಬಹುತೇಕ ಬೆರಳೆಣಿಕೆಯಷ್ಟು ಆಟೋ ಹಾಗೂ ಬಹುತೇಕ ಖಾಸಗಿ ಬಸ್ ಸೇವೆ ಹೊರತುಪಡಿಸಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಪೂರ್ಣ ಬಂದ್ ಆಗಿದ್ದವು ಇದರಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.
ಆಟೋಗಳಿಗೆ ಹಬ್ಬ, ಪ್ರಯಾಣಿಕರಿಗೆ ಉಪವಾಸ
ಇನ್ನು ಮುಷ್ಕರದ ಹಿನ್ನಲೆಯಲ್ಲಿ ಸರ್ಕಾರಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ದುಬಾರಿ ಹಣ ಪಡೆದು ಕುರಿತು ಕೂಡ ವರದಿಯಾಗಿದೆ. ಮುಷ್ಕರಕ್ಕೆ ಕೆಲ ಆಟೋ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದರೂ, ಒಂದಷ್ಟು ಆಟೋಗಳು ರಸ್ತೆಗೆ ಇಳಿದಿದ್ದವು. ಈ ಪೈಕೆ ಕೆಲ ಆಟೋ ಚಾಲಕರು ಪ್ರಯಾಣಿಕರಿಂದ ದುಬಾರಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಕನಿಷ್ಟ ಮೀಟರ್ ಬೆಲೆ ತೋರಿಸುವ ಪ್ರದೇಶಗಳಿಗೂ ಇಂದು ಆಟೋ ಚಾಲಕರು ನೂರಾರು ರುಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಕೆಲ ಪ್ರಯಾಣಿಕರು ಆರೋಪಿಸಿದ್ದಾರೆ.
ಸರ್ಕಾರಿ ಬಸ್ ಗಳಿಗೆ ಕಲ್ಲು
ಇನ್ನು ಮುಷ್ಕರದ ಹೊರತಾಗಿಯೂ ಬೆಳಿಗ್ಗೆ ಬಿಎಂಟಿಸಿ ಅಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಕೆಲ ಬಸ್ ಗಳು ರಸ್ತೆಗಿಳಿದಿದ್ದರಿಂದ ಪ್ರತಿಭಟನಾಕಾರರು ಆಕ್ರೋಶಗೊಂಡು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರಸಂಗ ಕೂಡ ನಡೆಯಿತು. ಜಾಲಹಳ್ಳಿ ಕ್ರಾಸ್, ರಿಚ್ಮಂಡ್ ವೃತ್ತ, ಮಾಗಡಿ ರಸ್ತೆ ಸೇರಿದಂತೆ ಹಲವೆಡೆ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಾಟದಲ್ಲಿ ಪಾಲ್ಗೊಂಡಿದ್ದ ಕಿಡಿಗೇಡಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟದಿಂದ ಬಸ್‍ಗಳು ಕಿಟಕಿಯ ಗಾಜುಗಳು ಪುಡಿ ಪುಡಿಯಾದವು. ಇದರಿಂದ ಎತ್ತೆಚ್ಚುಕೊಂಡ ಅಧಿಕಾರಿಗಳು ಮತ್ತೆ ಬಸ್ ಸಂಚಾರವನ್ನು ಸ್ಥಗಿತಗೊಳಿಸದರು.
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ನಗರ ಹೆಚ್ಚುವರಿ ಪೋಲಿಸ್ ಆಯುಕ್ತ ಅಲೋಕ್ ಕುಮಾರ್ ಅವರು, ಪ್ರಯಾಣಿಕರ ದೃಷ್ಟಿಯಿಂದ ಬಸ್ ಗಳನ್ನು ಓಡಿಸುವಂತೆಯೂ, ಬಸ್‌ಗಳಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಬಲವಂತವಾಗಿ ಮುಷ್ಕರ ನಡೆಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಅಲೋಕ್ ಕುಮಾರ್ ನೀಡಿದ್ದರು. ಆದರೂ ಅಧಿಕಾರಿಗಳು ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಬಸ್ ಗಳಿಗೆ ತೊಂದರೆಯಾದರೇ ತಾವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂಬ ಕಾರಣದಿಂದ ಅಧಿಕಾರಿಗಳು ಬಸ್ ಗಳನ್ನು ಓಡಿಸಲು ಮನಸ್ಸು ಮಾಡಲಿಲ್ಲ.