ಬೆಂಗಳೂರು: ಬೆಂಗಳೂರು ನಗರ ಸ್ವಚ್ಛವಾಗಿಡಬೇಕಾದರೆ ಮೊದಲು ನಿಮ್ಮ ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಅಕ್ರಮ ಹಾಗೂ ಅಶ್ಲೀಲ ಜಾಹೀರಾತುಗಳಿಂದ ನಗರ ತುಂಬಿ-
ಹೋಗಿದ್ದರೂ, ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗುತ್ತಿಲ್ಲ. ಸಣ್ಣ-ಪುಟ್ಟವರ ವಿರುದ್ಧ ದಬ್ಬಾಳಿಕೆ ನಡೆಸುತ್ತೀರಿ, ಏನಿದು ನಿಮ್ಮ ಕಾರ್ಯವೈ ಖರಿ?' ಇದು ಹೈಕೋರ್ಟ್ ಬಿಬಿಎಂಪಿಗೆ ಮಂಗಳಾರತಿ ಮಾಡಿದ ಪರಿ.
ಜಯನಗರದ ಮರಿಯಪ್ಪ ರಸ್ತೆಯಲ್ಲಿನ ಆಂಧ್ರ ಬ್ಯಾಂಕ್ ಶಾಖೆಯು ತನ್ನ ಆವರಣದಲ್ಲಿ `ನಮ್ಮಲ್ಲಿ ಚಿನ್ನಕ್ಕೆ ಸಾಲ ಕೊಡಲಾಗುವುದು' ಎಂದು ಜಾಹೀರಾತು ಫಲಕ ಹಾಕಿತ್ತು. ಬಿಬಿಎಂಪಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯ ಪೊಲೀಸರು ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ-1981ರ ಅನ್ವಯ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನು ರದ್ದುಪಡಿಸುವಂತೆ ಕೋರಿ ಬ್ಯಾಂಕ್ ವ್ಯವಸ್ಥಾಪಕರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ನಗರದಲ್ಲಿ ರಾರಾಜಿಸುತ್ತಿರುವ ಅಕ್ರಮ ಜಾಹೀರಾತುಗಳ ಅಂಕಿ ಅಂಶ ವರದಿ ನೀಡುವಂತೆ ಖುದ್ದು ಹಾಜರಾಗಿದ್ದ ಜಾಹೀರಾತು ವಿಭಾಗದ ಸಹಾಯಕ ಜಂಟಿ ಆಯುಕ್ತ ಎಸ್.ಕೆ. ಮಥಾಯಿ ಅವರಿಗೆ ನಿರ್ದೇಶಿಸಿದೆ.