ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಬಿಬಿಎಂಪಿ ಆವರಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಬಿಬಿಎಂಪಿ ಆವರಣಕ್ಕೆ ಬುಧವಾರ ಬಿಜೆಪಿ ಮುಖಂಡರು ಸ್ಥಳೀಯರೊಂದಿಗೆ ಆಗಮಿಸಿ, ಮಹದೇವಪುರ ಕ್ಷೇತ್ರದ ವಾರ್ಡ್‍ಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಕಸ ಹಾಕಲು ಮುಂದಾಗಿರುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಆಡಳಿತ ತಮ್ಮ ಪರವಾಗಿರುವವರ ವಾರ್ಡ್‍ಗೆ ಹೆಚ್ಚಿನ ಅನುದಾನ ನೀಡಿದೆ. ಆದರೆ ಪ್ರತಿವರ್ಷ ಅಧಿಕ ತೆರಿಗೆ ನೀಡುವ ಮಹದೇವಪುರಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಪಾಲಿಕೆ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಆದಾಯಗಳಿಸಿಕೊಳ್ಳಲು ಮಾತ್ರ ಸಮಯವಿ ದೆ. ಈಗಿನ ಸರ್ಕಾರ ತಮ್ಮ ಕ್ಷೇತ್ರವನ್ನು ಕಡೆಗಣಿಸಿದ್ದು, ವಾರ್ಡ್‍ಗೆ ನೀಡುವ ಅನು- ದಾನದಲ್ಲಿ ಕಡಿತಗೊಳಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ನೀಡಿದ ಅನುದಾನ ಕ್ಷೇತ್ರಕ್ಕೆ ಸಾಲುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಈ ಕ್ಷೇತ್ರದಿಂದ ಬಿಬಿಎಂಪಿಗೆ ರು.271 ಕೋಟಿ ತೆರಿಗೆ ಸಂಗ್ರಹವಾಗಿದೆ. ಕಳೆದ ಸಾಲಿನಲ್ಲಿ ರು.300 ಕೋಟಿ ಹಾಗೂ ಅದಕ್ಕೂ ಹಿಂದೆ ರು.171 ಕೋಟಿ ತೆರಿಗೆ ಸಂಗ್ರಹವಾಗಿದೆ.
ಸರ್ಕಾರಕ್ಕೆ ಈ ಬಾರಿ ಕ್ಷೇತ್ರದಿಂದ ರು.924 ಕೋಟಿ ಆದಾಯ ಸಂಗ್ರಹವಾಗಿದೆ. ಇಷ್ಟಾದರೂ ಹೊರವಲಯದ ವಾರ್ಡ್‍ಗಳಿಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ದೂರಿದರು.
ಶಾಸಕ ಆರ್.ಅಶೋಕ ಮಾತನಾಡಿ, ಬೆಂಗಳೂರು ಗುಂಡಿಗಳ ನಗರವಾಗಿದ್ದು, ನಿಧಾನಗತಿಯಲ್ಲಿ ಕಾಮಗಾರಿ ಮಾಡಿದರೆ 5 ವರ್ಷಗಳಾದರೂ ಗುಂಡಿ ಮುಚ್ಚಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಮಾತ್ರ ಮಾಡುತ್ತಿದ್ದಾರೆ. ಆದರೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಯಾರಿಗೂ ಗಮನವಿಲ್ಲ ಎಂದರು.
ಕಸ ಬೇಡ: ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಮಹದೇವಪುರದ ಮಂಡೂರಿನಲ್ಲಿ ಕಸ ಸಮಸ್ಯೆ ಇತ್ತೀಚೆಗಷ್ಟೇ ಬಗೆಹರಿದಿದೆ. ಈಗ ಇದೇ ವಲಯದ ಕಾಡ ಅಗ್ರಹಾರದಲ್ಲಿ ಕಸ ಹಾಕಲು ಡಂಪಿಂಗ್ ಯಾರ್ಡ್ ಗುರುತಿಸಲಾಗಿದೆ. ಇದರಿಂದ ಮತ್ತೊಂದು ಮಂಡೂರು ಸೃಷ್ಟಿಯಾಗಲಿದೆ. ಹೊಸ ಆಡಳಿತ ಬಂದು ಎರಡು ತಿಂಗಳು ಕಳೆಯುತ್ತಾ ಬಂದರೂ ಪ್ರಗತಿ ಕಂಡಿಲ್ಲ ಎಂದರು.
ನಂತರ ಸ್ಥಳಕ್ಕಾಗಮಿಸಿದ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಆಯುಕ್ತ ಕುಮಾರ್ ನಾಯಕ್, ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಕಾಡ ಅಗ್ರಹಾರದಲ್ಲಿ ಗುರುತಿಸಿದ ಜಾಗದಲ್ಲಿ ಸದ್ಯಕ್ಕೆ ಕಟ್ಟಡ ತ್ಯಾಜ್ಯ ಮಾತ್ರ ಹಾಕಲಾಗುತ್ತಿದೆ. ಆದರೆ ನಗರದ ಕಸಹಾಕುವ ಯೋಜನೆ ರೂಪಿಸಿಲ್ಲ. ಇದು ಸರ್ಕಾರದ ನಿರ್ಧಾರವಾಗಿದ್ದು, ಈ ಬಗ್ಗೆ ಚರ್ಚಿಸಬೇಕಿದೆ. ಒಂದು ಬಾರಿ ಮಂಡೂರು ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದು, ಮತ್ತೊಂದು ಡಂಪಿಂಗ್ ಯಾರ್ಡ್ ಮಾಡುತ್ತಿಲ್ಲ ಎಂದು ಮೇಯರ್ ಸ್ಪಷ್ಟನೆ ನೀಡಿದರು. ಶಾಸಕ ವಿಜಯ ಕುಮಾರ್, ಬಿಜೆಪಿ ನಗರಾಧ್ಯಕ್ಷ ಸುಬ್ಬನರಸಿಂಹ, ಕಾರ್ಪೊರೇಟರ್ ಮುನಿಸ್ವಾಮಿ ಹಾಜರಿದ್ದರು.