ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಹೆಣ್ಣು ಮಕ್ಕಳು ಒಂಟಿಯಾಗಿ ಓಡಾಡುವುದು ಅಸುರಕ್ಷಿತ ಎನ್ನುವ ಮಾತುಗಳು ಕೇಳಿ ಬರುತ್ತಿರುವ ನಡುವೆ ಅದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಜಿಸಿ ನಗರದ ನಂದಿದುರ್ಗ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ತನ್ನ ಸ್ನೇಹಿತನ ಜತೆ ಸೇರಿ 23 ವರ್ಷದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನೊಂದ ಯುವತಿ, ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠೀಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆಟೋ ನೋಂದಣಿ ಸಂಖ್ಯೆಯನ್ನು ಯುವತಿ ಬರೆದುಕೊಂಡಿಲ್ಲ. ಹೀಗಾಗಿ, ಸಿಸಿ ಕ್ಯಾಮರಾಗಳ ವಿಡಿಯೋ ಆಧರಿಸಿ ಚಾಲಕನ ಬಂಧನಕ್ಕೆ ಜಾಲ ಬೀಸಲಾ ಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ಗುರುವಾರ ರಾತ್ರಿ ಸ್ನೇಹಿತ ನೊಂದಿಗೆ ಎಂ.ಜಿ ರಸ್ತೆಯಲ್ಲಿ ಊಟ ಮಾಡಿದಳು.11.30ರ ಸುಮಾರಿಗೆ ಕಾವೇರಿ ಎಂಪೋರಿಯಂ ಬಲಿ ಯುವತಿಯನ್ನು ಆಟೋ ಹತ್ತಿಸಿ ಕಳುಹಿಸಿಕೊಟ್ಟಿದ್ದ. ಆಟೋ ಚಾಲಕರು ಧರಿಸುವ ಖಾಕಿ ವಸ್ತ್ರದಲ್ಲಿದ್ದ ಚಾಲಕ ನಂದಿದುರ್ಗ ರಸ್ತೆಯಲ್ಲಿ ಮತ್ತೊಬ್ಬ ಸ್ನೇಹಿತನನ್ನು ಆಟೋದಲ್ಲಿ ಹತ್ತಿಸಿಕೊಂಡು ತನ್ನ ಸೀಟಿನ ಪಕ್ಕದಲ್ಲಿ ಕೂರಿಸಿಕೊಂಡಿದ್ದಾನೆ. ಅಲ್ಲಿಂದ ಸ್ವಲ್ಪ ಮುಂದೆ ಆಟೋ ತೆರಳಿದೆ. ನಂದಿದುರ್ಗ ಲೇ ಔಟ್ ನಲ್ಲಿ ಯುವತಿ ಮನೆ ಇನ್ನು ಸುಮಾರು 300ರಿಂದ 400 ಮೀಟರ್ ದೂರ ಇದೆ ಎನ್ನುವಾಗ ಆಟೋ ನಿಲ್ಲಿಸಿದ ಚಾಲಕ ಹಾಗೂ ಆತನ ಸ್ನೇಹಿತರು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದರು. ಅದೇ ವೇಳೆಗೆ ಬೈಕ್ ವೊಂದು ಬಂದಿದ್ದು ಅದರಿಲ್ಲದ್ದ ಇಬ್ಬರು ಆಟೋ ಹತ್ತಿರ ಬಂದು ಚಾಲಕನನ್ನು ಮಾತನಾಡಿಸಲು ಆರಂಭಿಸಿದರು. ಆಗ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಳು.
ಘಟನೆಯಿಂದ ಆಘಾತಗೊಂಡ ಯುವತಿ, ತನ್ನ ಸ್ನೇಹಿತನಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬುಧವಾರ ಬೆಳಗ್ಗೆ ಇಬ್ಬರೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಯುವತಿ ತಾನು ಪ್ರಯಾಣಿಸಿದ ಆಟೋದ ನೋಂದಣಿ ಸಂಖ್ಯೆಯನ್ನು ನೋಡಿಲ್ಲ. ಆದರೆ, ಎಂ.ಜಿ.ರಸ್ತೆಯಿಂದ ಹಿಡಿದು ಕೇಂದ್ರ ವಾಹಿವಾಟು ಪ್ರದೇಶ (ಸಿಬಿಡಿ) ಒಳಗೊಂಡಂತೆ ಎಲ್ಲ ಪ್ರದೇಶಗಳಲ್ಲಿ, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ಟ್ರಾಫಿಕ್ ಸಿಗ್ನಲ್ ಗಳಲ್ಲೂ ಸಿಸಿ ಕ್ಯಾಮರಾಗಳಿವೆ. ಯುವತಿ ಆಟೋವನ್ನು ಹತ್ತಿಸಿಕೊಂಡ ಸಮಯದ ಆಧಾರದಲ್ಲಿ ವಿಡಿಯೋ ಪರಿಶೀಲನೆ ನಡೆಸಿ ಆಟೋ ಪತ್ತೆ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.