ಬೆಳಗಾವಿ: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಫೊಟೋ ತೆಗೆದು, ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾರಿಹಾಳ ಪೊಲೀಸರು ಬಂಧಿಸಿ, ಆತನ ಬಳಿಯಿದ್ದ ಮೊಬೈಲ್, ಕ್ಯಾಮೆರಾ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಕಲಬುರಗಿ ಮೂಲದ ಮಹಮ್ಮದ್ ಹುಸೇನ್ ಅಲಿ ಖುರೇಷಿ(21) ಎಂದು ಗುರುತಿಸಲಾಗಿದೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಯಾವುದೇ ಅನುಮತಿ ಪಡೆಯದೇ, ಸಂದೇಹಾಸ್ಪದವಾಗಿ ಫೊಟೋ ತೆಗೆದು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ. ಸರಿಯಾದ ಮಾಹಿತಿ ನೀಡದಿದ್ದಾಗ ಮಾರಿಹಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಕೆಲವು ಆಘಾತಕಾರಿ ಮಾಹಿತಿ ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಲ್ಯಾಪ್‍ಟಾಪ್‍ನಲ್ಲಿ ಪೊಟೋ: ಖುರೇಷಿ ಲ್ಯಾಪ್‍ಟಾಪ್‍ನಲ್ಲಿ ಬೆಳಗಾವಿ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಪೊಟೋಗಳು ಪತ್ತೆಯಾಗಿವೆ.
ಅಲ್ಲದೇ ರಾಜ್ಯದ ಹಲವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳಪೊಟೋಗಳೂ ಇದ್ದವು. ಈ ಕುರಿತು ಆತಮಾಹಿತಿ ನೀಡಿಲ್ಲ. ಅನಾಮಿಕ ವ್ಯಕ್ತಿಯೋಬ್ಬರು ರಾಜ್ಯದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳ ಫೊಟೋ ಕೇಳಿದ್ದರು. ಅದಕ್ಕಾಗಿ ಫೊಟೋ, ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾಗಿ ಆತ ಹೇಳಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಶೇಷ ತಂಡ ವಿಚಾರಣೆ: ಬಂಧಿತ ಖುರೇಷಿಯನ್ನು ಮಂಗಳವಾರ ನಾಲ್ಕು ಗಂಟೆ ಕಾಲ ಮಾರಿಹಾಳ ಪೊಲೀಸರು ಹಾಗೂ ಬೆಂಗಳೂರಿನಿಂದ ಬಂದ ವಿಶೇಷ ತಂಡ ಸುದೀರ್ಘ ವಿಚಾರಣೆ ನಡೆಸಿದೆ. ಆತ ಉಗ್ರಗಾಮಿ ಸಂಘಟನೆಯೊಂದದರ ಜೊತೆ ನಂಟು ಹೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಆ ಕುರಿತೂ ವಿಚಾರಣೆ ನಡೆಯುತ್ತಿದೆ.