ತಗಡೂರು: ಮಕ್ಕಳಿಗೆ ಶಾಲೆಯಲ್ಲಿ ಮೂರು ಗಂಟೆವರೆಗೂ ಬಿಸಿಯೂಟ ಕೊಡದೆ ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬರ ತಿಥಿ ಕಾರ್ಯಕ್ರಮದ ಊಟವನ್ನೇ ನಂತರ ಬಡಿಸಿದ ಘಟನೆ
ನಂಜನಗೂಡು ತಾಲೂಕು ಚುಂಚನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬುಧವಾರ ನಡೆದಿದೆ.
ಶಾಲೆ ಮುಗಿದ ಬಳಿಕ ಮನೆಗೆ ತೆರಳಿದ ಕೆಲವು ಮಕ್ಕಳು ಹೊಟ್ಟೆ ನೋವು ಎಂದ ಹಿನ್ನೆಲೆಯಲ್ಲಿ ಪೋಷಕರು ಶಾಲೆಯಲ್ಲಿ ಊಟದ ಬಗ್ಗೆ ವಿಚಾರಿಸಿ ದಾಗಲೇ ಈ ವಿಚಾರ ಬಹಿರಂಗವಾಗಿದೆ. ಘಟನೆ ಕುರಿತು ಪೋಷಕರು ಗುರುವಾರ ಬೆಳಗ್ಗೆ ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅಡುಗೆ ತಯಾರಕರನ್ನು ನೇಮಿಸಿದೆ.
ಆದರೂ ಮಕ್ಕಳಿಗೆ ಬಿಸಿಯೂಟದ ಬದಲು ತಿಥಿ ಊಟ ಏಕೆ ನೀಡಿದ್ದೀರಿ? ಪ್ರತಿದಿನ ಮಾಡುವ ಬಿಸಿಯೂಟ ಮಕ್ಕಳಿಗೆ ಇಷ್ಟವಾಗುತ್ತಿಲ್ಲ ಎಂದು ದೂರಿದ್ದಾರೆ. ಅಡುಗೆ ಸಹಾಯಕಿ ನಾಗರತ್ನಮ್ಮ ಅವರನ್ನು ವಿಚಾರಿಸಿದಾಗ ಶಾಲೆಯಲ್ಲಿ 104 ಮಕ್ಕಳಿಗೆ ಊಟ ಮಾಡಲಾಗುತ್ತದೆ. ಮುಖ್ಯ ಶಿಕ್ಷಕರು ತರುವ ತರಕಾರಿ ಅಡುಗೆಗೆ ಸಾಕಾಗುತ್ತಿಲ್ಲ ಎಂದಿದ್ದಾರೆ.