ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ 27 ಸಾವಿರ ಅಕ್ರಮ!

ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ ಸುಮಾರು 27,768 ಅಕ್ರಮ ಸಂಪರ್ಕಗಳಿರುವುದು ಪತ್ತೆಯಾಗಿವೆ. ನೀರು ಪೂರೈಕೆ ಅಕ್ರಮಗಳು ಮತ್ತು ಆದಾಯದಲ್ಲಿ ಆಗುತ್ತಿರುವ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಲಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ...

(ಸಾಂದರ್ಭಿಕ ಚಿತ್ರ)
Manjula VN
Updated On : 8 Dec 2015, 10:04 am

ಬೆಂಗಳೂರು: ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ ಸುಮಾರು 27,768 ಅಕ್ರಮ ಸಂಪರ್ಕಗಳಿರುವುದು ಪತ್ತೆಯಾಗಿವೆ. ನೀರು ಪೂರೈಕೆ ಅಕ್ರಮಗಳು ಮತ್ತು ಆದಾಯದಲ್ಲಿ
ಆಗುತ್ತಿರುವ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಲಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ಈ ವಿಚಾರ ಬಹಿರಂಗಗೊಂಡಿದೆ.

ಬೆಂಗಳೂರಿನ ಪಶ್ಚಿಮ ಭಾಗದಲ್ಲಿಯೇ ಹೆಚ್ಚು ಅಕ್ರಮ ಸಂಪರ್ಕಗಳಿದ್ದು, ನಾಗರಬಾವಿ, ಚಂದ್ರಾಲೇಔಟ್, ವಿಜಯನಗರ ಸೇರಿದಂತೆ ಈ ವಿಭಾಗದಲ್ಲಿ ಒಟ್ಟು 3,314 ಅಕ್ರಮ ಸಂಪರ್ಕಗಳಿವೆ. ನಗರದಲ್ಲಿ ಸುಮಾರು 70ಸಾವಿರ ಅಕ್ರಮ ಸಂಪರ್ಕಗಳಿರುವ ಬಗ್ಗೆ ಅಂದಾಜಿಸಲಾಗಿತ್ತು. ಆದರೆ ಸಮೀಕ್ಷೆ ಮಾಡಿದಾಗ 27,768 ಅಕ್ರಮ ಸಂಪರ್ಕ ಇರುವುದು ತಿಳಿದುಬಂದಿದೆ.

ಖಾಲಿ ಇರುವಸ್ಥಳಗಳಿಗೆ ಅನುಮತಿ ಇಲ್ಲದೇ ನೀರಿನ ಸಂಪರ್ಕ  ಪಡೆಯುವಂತಿಲ್ಲ. ಆದರೆ, ಅನೇಕ ಕಡೆ ಅನುಮತಿ ಇಲ್ಲದಿದ್ದರೂ ಸಂಪರ್ಕ ಒದಗಿಸಲಾಗಿದೆ. ಆದರೂ ಅನೇಕ ಕಡೆ ಆರ್ ಆರ್ ನಂಬರ್ ನೀಡಿಲ್ಲ. ಇದೇ ರೀತಿ ಕೆಲ ಅಂಗಡಿಗಳು ಅಕ್ರಮ ಸಂಪರ್ಕ ಹೊಂದಿವೆ. ಆದ್ದರಿಂದ ಅಕ್ರಮ ಸಂಪರ್ಕ ಹೊಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಹೇಳಿದ್ದಾರೆ.

ಬೆಂಗಳೂರು ಕೇಂದ್ರ, ದಕ್ಷಿಣ ಮತ್ತುಪಶ್ಚಿಮ ಭಾಗಗಳಲ್ಲಿ ಹೆಚ್ಚು ನೀರು ಸೋರಿಕೆ ಕಂಡುಬಂದಿದ್ದು, ಕೆಲವೆಡೆ ಪೈಪ್‍ಲೈನ್‍ಗಳನ್ನು ಬದಲಾಯಿಸಿ ಸಮಸ್ಯೆ ಸರಿಪಡಿಸಲಾಗಿದೆ. ಹದಗೆಟ್ಟ ಮೀಟರ್‍ಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಈ ಕೆಲಸ ಮುಗಿಯಲು ಇನ್ನೂ 6 ವರ್ಷಗಳು ಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಈ ನಡುವೆ ಅಕ್ರಮ ನೀರು ಸಂಪರ್ಕ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಮಾಧ್ಯಮ ಮೂಲಕ ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಅಕ್ರಮ-ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ಕೆಲವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇಷ್ಟಾದರೂ ಸಕ್ರಮ ಮಾಡಿಕೊಳ್ಳದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ವಿಜಯಭಾಸ್ಕರ್ ಎಚ್ಚರಿಸಿದ್ದಾರೆ. ಎಲ್ಲೆಲ್ಲಿ ಅಕ್ರಮ ಸಂಪರ್ಕ: ಹೈಗ್ರೌಂಡ್ಸ್, ಮಿಲ್ಲರ್ ರೋಡ್, ಕೋಲಿಸ್‍ಪಾರ್ಕ, ಕನ್ನಿಂಗ್ಹ್ಯಾಮ್ ರೋಡ್, ತುಳಸಿತೋಟ, ಚಿಕ್ಕಲಾಲ್ ಬಾಗ್, ಬಾನಪ್ಪ ಪಾರ್ಕ, ಕೆ.ಜಿ.ರೋಡ್, ಸುಧಾಮನಗರ ಮತ್ತು ಲಿಂಗರಾಜಪುರಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement