25ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಶಾಸ್ತ್ರೀಯ ನೃತ್ಯ
ಶಾಸ್ತ್ರೀಯ ನೃತ್ಯಕ್ಕೆ ಸಮಕಾಲಿನ ನೃತ್ಯಗಳನ್ನು ಬೆಸುಗೆ ಹಾಕಿ ಮನರಂಜನೆಯ ಮಹಾಪೂರವನ್ನೇ ಹರಿಸುವ ನಿರುಪಮಾ-ರಾಜೇಂದ್ರ ಎಂಬ ಜೋಡಿ ಎಲ್ಲರಿಗೂ ಗೊತ್ತೇ ಇದೆ...
ಬೆಂಗಳೂರು: ಶಾಸ್ತ್ರೀಯ ನೃತ್ಯಕ್ಕೆ ಸಮಕಾಲಿನ ನೃತ್ಯಗಳನ್ನು ಬೆಸುಗೆ ಹಾಕಿ ಮನರಂಜನೆಯ ಮಹಾಪೂರವನ್ನೇ ಹರಿಸುವ ನಿರುಪಮಾ-ರಾಜೇಂದ್ರ ಎಂಬ ಜೋಡಿ ಎಲ್ಲರಿಗೂ ಗೊತ್ತೇ ಇದೆ.
ಸುಮಾರು 24 ರಾಷ್ಟ್ರಗಳಲ್ಲಿ ಇಂತಹ 700ಕ್ಕೂ ಹೆಚ್ಚು ಮನರಂಜನೆ ನೀಡಿರುವ ಈ ಜೋಡಿ ಹಾಗೂ ಅವರ ತಂಡ ಈಗ ಬೆಂಗಳೂರಿನ ಕಲಾರಸಿಕರಿಗೆ ಇಂತಹ ಸಮಕಾಲಿನ ನೃತ್ಯದ ರಸದೌತಣ ಬಡಿಸಲು ಮುಂದಾಗಿದೆ. ಇವರ ಅಭಿನವ ಡ್ಯಾನ್ಸ್ ಕಂಪನಿಯಿಂದ ಇದೇ ಡಿಸೆಂಬರ್ 25 ಮತ್ತು 26 ರಂದು ಸಂಜೆ 6 ರಿಂದ 9 ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಭಿಜ್ಞಾ ಎಂಬ ಹೆಸರಿನ ಶಾಸ್ತ್ರೀಯ ನೃತ್ಯ ಮತ್ತು ಸಾಂಸ್ಕೃತಿಕ ಮೇಳ ಹಮ್ಮಿಕೊಂಡಿದೆ. ಎರಡು ದಿನಗಳ ಕಾಲ ನಡೆಯಲಿದ್ದು, ಮಾಹಿತಿಗಾಗಿ 9449316765 ಸಂಪರ್ಕಿಸಬಹುದು.
ಎರಡು ದಿನಗಳ ಈ ಪ್ರದರ್ಶನದಲ್ಲಿ 250ಕ್ಕೂ ಅಧಿಕ ಕಲಾವಿದರು ತಮ್ಮ ಕಲಾ ಕೌಶಲ ಪ್ರದರ್ಶಿಸಲಿದ್ದಾರೆ. ಮೊದಲ ದಿನ ನಿರುಪಮಾ-ರಾಜೇಂದ್ರ ಸೇರಿದಂತೆ ಸುಮಾರು 100 ಮಂದಿ ಕಲಾವಿದರು ಹಾಗೂ ಎರಡನೇ ದಿನ 150ಕ್ಕೂ ಅಧಿಕ ಕಲಾವಿದರು ತಮ್ಮ ಕಲಾ ಕೌಶಲವನ್ನು ಪ್ರದರ್ಶಿಸಲಿದ್ದಾರೆ.
ಮೊದಲ ದಿನ ಶಾಸ್ತ್ರೀಯ-ಆಧುನಿಕ ಪರಂಪರೆಯ ನೃತ್ಯಗಳು ಪ್ರದರ್ಶನಗೊಳ್ಳಲಿವೆ. ಎರಡನೇ ದಿನ 6 ರಿಂದ 70 ವರ್ಷದವರಿಗೂ ಇಷ್ಟವಾಗುವ ಬಗೆಯಲ್ಲಿ ನೃತ್ಯ ಮೇಳವನ್ನು ಕಟ್ಟಿಕೊಡುವ ಪ್ರಯತ್ನ ನಡೆಸಲಿದೆ ಎಂದು ನಿರುಪಮಾ ವಿವರಿಸಿದರು.