ಬೆಂಗಳೂರು: ತಮಿಳುನಾಡಿನಿಂದ ಮೂವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಕಾರು ಚಾಲಕ ನಿಗೂಢವಾಗಿ ಮೃತಪಟ್ಟಿದ್ದು, ಗೋವಿಂದಶೆಟ್ಟಿ ಪಾಳ್ಯದ ಬಸವನಗರ ರಸ್ತೆ ಬಳಿಯ ಪೊದೆಯೊಂದರಲ್ಲಿ ಶವ ಪತ್ತೆಯಾಗಿದೆ.
ಮೃತ ಚಾಲಕನನ್ನು ವೆಲ್ಲೂರಿನ ಪಾಂಡಿಯನ್ (27) ಎಂದು ಗುರುತಿಸಲಾಗಿದೆ. ಮೃತನ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಶುಕ್ರವಾರ ಸಂಜೆ 6 ಗಂಟೆ ವೇಳೆ ತಮಿಳನಾಡಿನಿಂದ ಹರಿದಾಸ್ ಸೇರಿದಂತೆ ಮೂವರನ್ನು ಬೆಂಗಳೂರಿನ ಹೋಟೆಲ್ ವೊಂದಕ್ಕೆ ಕರೆದೊಯ್ದಿದ್ದಾನೆ. ಮೂವರು ಪ್ರಯಾಣಿಕರು ಹೋಟೆಲ್‍ನಲ್ಲಿ ಮದ್ಯ ಸೇವಿಸಿ ಮಲಗಿದ್ದಾರೆ.
ನಂತರ ಚಾಲಕ ಪಾಂಡಿಯನ್ ನಾಪತ್ತೆಯಾಗಿದ್ದು, ಶನಿವಾರ ಬೆಳಗ್ಗೆ ಮೂತ್ರ ವಿಸರ್ಜನೆಗೆಂದು ಪೊದೆ ಬಳಿ ಹೋದ ಸಾರ್ವಜನಿಕರು ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹರಿದಾಸ್ ರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.