ಬೆಂಗಳೂರು: ಇಬ್ಬರು ಅಪರಿಚಿತರು ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಕಾರಿನ ಸೀಟ್ ಮೇಲಿದ್ದ ರು.8.50 ಲಕ್ಷ ಹಣವಿದ್ದ ಸೂಟ್ ಕೇಸ್ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ (ಡಿ.14) ರಾತ್ರಿ ಲಾಲ್‍ಬಾಗ್ ಸಿಗ್ನಲ್‍ನಲ್ಲಿ ನಡೆದಿದೆ.
ಲಾಲ್‍ಬಾಗ್ ಸಮೀಪದ ಕಚೇರಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಂಗಾ ನಿಯಾ ಅವರು ಸೋಮವಾರ ರಾತ್ರಿ 8.30ರ ಸುಮಾರಿನಲ್ಲಿ ಕಚೇರಿಗೆ ಸಂಬಂಧಿಸಿದ ರು.8.50 ಲಕ್ಷ ಹಣವನ್ನು ತಮ್ಮ ಕಾರಿನಲ್ಲಿ ಇಟ್ಟುಕೊಂಡು ಬಿಳೇಕಹಳ್ಳಿ ನಿವಾಸಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಲಾಲ್‍ಬಾಗ್ ಸಿಗ್ನಲ್ ಬಳಿ ಕಾರನ್ನು ನಿಲ್ಲಿಸಿದ್ದರು. ಇದೇ ಸಮಯಕ್ಕೆ ಬೈಕ್‍ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಬೈಕ್ ಅನ್ನು ಕಾರಿನ ಪಕ್ಕದಲ್ಲಿಯೇ ನಿಲ್ಲಿಸಿದ್ದಾರೆ. ಇದರಲ್ಲಿ ಒಬ್ಬಾತ ನಿಮ್ಮ ಕಾರಿನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಸಿಂಗಾನಿಯಾ ಅವರ ಗಮನ ಬೇರೆಡೆ ಸೆಳೆದಿದ್ದಾನೆ.
ಕೂಡಲೇ ಕಾರ್‍ನಿಂದ ಕೆಳಗಿಳಿದ ಸಿಂಗಾನಿಯಾ ಅವರು ಕಾರು ಪರೀಕ್ಷಿಸಲು ಮುಂದಾಗಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಇಬ್ಬರು ಅಪರಿಚಿತರು, ಕಾರಿನ ಸೀಟ್ ಮೇಲಿದ್ದ ಹಣವಿದ್ದ ಸೂಟ್‍ಕೇಸ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.