ಬೆಂಗಳೂರು: ನಗರದ ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ ಕೋಟ್ಯಂತರ ರು. ಅವ್ಯವಹಾರ ನಡೆದಿರುವ ಆರೋಪ ಪ್ರಕರಣದಲ್ಲಿ ದಾಖಲೆ ಸಲ್ಲಿಸಲು ಬಿಬಿಎಂಪಿಯ ಎಂಟು ಮಂದಿ ಎಂಜಿನಿಯರ್‍ಗಳಿಗೆ ಬಿಎಂಟಿಎಫ್ ಪೊಲೀಸ್ ಉಪ ಅಧೀಕ್ಷರು ನೀಡಿದ್ದ ನೋಟಿಸ್‍ಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ನೋಟಿಸ್ ರದ್ದು ಕೋರಿ ಬಿಬಿಎಂಪಿ ಎಂಜಿನಿಯರ್ ಬಸವರಾಜು ಆರ್. ಕಬಾಡೆ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ನೋಟಿಸ್‍ಗೆ ತಡೆ ನೀಡಿ, ಬಿಎಂಟಿಎಫ್ ಪೊಲೀಸ್ ಉಪ ಅಧೀಕ್ಷರು ಮತ್ತು ನಗರಾಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಮಾಡಿದೆ. ಅಲ್ಲದೆ, ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂ ಡಿತು.ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ರೂಪಿಸಿದ ಕಾರ್ಯಕ್ರಮದಡಿ ನಗರದಲ್ಲಿನ 1706 ಕಿ.ಮೀ. ರಸ್ತೆಗಳ ದುರಸ್ತಿ ಮತ್ತು ಡಾಂಬರು ಹಾಕಲು ಬಿಬಿಎಂಪಿ ರು.1,200 ಕೋಟಿ ಖರ್ಚು ಮಾಡಿದೆ. ಆ ರಸ್ತೆಗಳು ಬಹುಬೇಗ ಹಾಳಾದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಹೆಚ್ಚುವರಿ ರು.400 ಕೋಟಿ ಖರ್ಚು ಮಾಡಿದೆ. ಕಾಮಗಾರಿಯಲ್ಲಿ ಅವ್ಯಹವಾರ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿ ಮಾಜಿ ಸದಸ್ಯ ಎನ್.ಆರ್.ರಮೇಶ್ ಬಿಎಂಟಿಎಫ್ ಗೆ ದೂರು ನೀಡಿದ್ದರು.
ಇದೇ ವಿಚಾರವಾಗಿ ಅವರು ಲೋಕಾಯುಕ್ತದಲ್ಲಿಯೂ ದೂರು ಸಲ್ಲಿಸಿದ್ದು, ತನಿಖೆಗೆ ಉಪಲೋಕಾಯುಕ್ತರು ಆದೇಶಿಸಿದ್ದರು. ಈ ನಡುವೆ ಬಿಎಂಟಿಎಫ್ ಪೊಲೀಸ್ ಅಧೀಕ್ಷರು ಅರ್ಜಿದಾರಿಗೆ ಕಳೆದ ನ.23ರಂದು ನೋಟಿಸ್ ನೀಡಿ ಆರೋಪ ಸಂಬಂಧ ಎಲ್ಲ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಎಂಜಿನಿಯರ್‍ಗಳು ಬಿಎಂಟಿಎಫ್ ಜಾರಿ ಮಾಡಿದ್ದ ನೋಟಿಸ್ ರದ್ದು ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದರು.