ಬೆಂಗಳೂರು: ನಿವೇಶನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ರು.50 ಕೋಟಿ ಪಡೆದು ವಂಚಿಸಿ ಕಳೆದ 4 ವರ್ಷದಿಂದ ನ್ಯಾಯಾಲಕ್ಕೂ ಹಾಜರಾಗದೆ ತಲೆಮರೆಸಿಕೊಂಡಿದ್ದ
ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಕಲ್ಲಸಂದ್ರದ ಕುವೆಂಪುನಗರ 4ನೇ ಮುಖ್ಯರಸ್ತೆ ನಿವಾಸಿ ವಿ.ಭಾಸ್ಕರ್ ರೆಡ್ಡಿ (47) ಬಂಧಿತ ಆರೋಪಿ. ಈತ ಆಂಧ್ರಪ್ರದೇಶದ ಗುಂಟೂರು ಮೂಲದವನು. ಬಹಳ ದಿನಗಳಿಂದ
ಈತನ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ನ.16ರಂದು ಜಯನಗರದ ಶೋಭಾ ಅಪಾರ್ಟ್‍ಮೆಂಟ್‍ನಲ್ಲಿ ಬಂಧಿಸಿ ದ್ದಾರೆ. ಜಿಲ್ಲಾ ಗ್ರಾಹಕರ ನ್ಯಾಯಾಲಯದ ಆದೇಶದ ಮೇರೆಗೆ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಶೇ.40ರಷ್ಟು ಮುಂಗಡ ಹಣ: ಆರೋಪಿಯು 2006ರಲ್ಲಿ ಐಶ್ವರ್ಯ ಪ್ರಾಜೆಕ್ಟ್, ಪ್ರೆಸಿಡೆನ್ಸಿ ಗ್ರೂಪ್, ಮೈ ಕಂಟ್ರಿ, ಗ್ಲೋಬಲ್ ಸಿಟಿ ಮೊದಲಾದ ಹೆಸರಿನಲ್ಲಿ ದೇವನಹಳ್ಳಿ, ಹೊಸಕೋಟೆ ಬಿಡದಿ, ಮೈಸೂರು ಸೇರಿದಂತೆ ರಾಜ್ಯದ ನಾನಾ ಕಡೆ ಬಡಾವಣೆಗಳನ್ನು ನಿರ್ಮಿಸಿದ್ದು, ನಿವೇಶನ ಮಾರಾಟ ಮಾಡುತ್ತಿರುವುದಾಗಿ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಸಾರ್ವಜನಿಕರನ್ನು ನಂಬಿಸಿದ್ದ. ಬಳಿಕ ಅವುಗಳಿಗೆ ಬೆಲೆ ನಿಗದಿ ಮಾಡಿ ಕೆಲವರಿಂದ ನಿವೇಶನ ಬೆಲೆಯ ಶೇ.40ರಷ್ಟು ಹಣವನ್ನು ಮುಂಗಡವಾಗಿ ಪಡೆದು 2011ರ ವೇಳೆಗೆ ಸುಮಾರು ರು.50 ಕೋಟಿ ಹಣ ಸಂಗ್ರಹಿಸಿದ್ದ. ಬಳಿಕ ನಿವೇಶನವನ್ನೇ ನೀಡಲಿಲ್ಲ. ಹಣವನ್ನೂ ವಾಪಸ್ ಮಾಡದೆ ವಂಚಿಸಿ ತಲೆಮರೆಸಿಕೊಂಡಿದ್ದ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ 17 ದೂರುಗಳು ದಾಖಲಾಗಿದ್ದವು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಪೊಲೀಸರು 2011ರ ಜೂನ್‍ನಲ್ಲಿ ಆರೋಪಿ ವಿ.ಭಾಸ್ಕರ್ ರೆಡ್ಡಿಯನ್ನು ಬಂಧಿಸಿ ಹೊಸಕೋಟೆ, ಬಿಡದಿ ಮತ್ತು ಮೈಸೂರು ಬಳಿಯ ಸುಮಾರು 107 ಎಕರೆ ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಬೆಲೆ ಬಾಳುವ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದರು. ಈ ವಂಚನೆ ಕೃತ್ಯದಲ್ಲಿ ಇನ್ನೂ ಅನೇಕ ಸಂಸ್ಥೆ ಮತ್ತು ವ್ಯಕ್ತಿಗಳ ಕೈವಾಡದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದರು. ವಂಚನೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು.
ಜಾಮೀನು ರಹಿತ ವಾರೆಂಟ್: ಆರೋಪಿ ಭಾಸ್ಕರ್ ಮೇಲೆ 2011ರಿಂದ ಇದುವರೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ನಗರ 4ನೇ ಅಪರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ನಗರ ನ್ಯಾಯಾಲಯಗಳಲ್ಲಿ 300 ವ್ಯಾಜ್ಯಗಳಿವೆ. ಸುಮಾರು 850 ಬಾರಿ ಪುನರಾವರ್ತಿತ ವಾರೆಂಟ್ ಹೊರಡಿಸಲಾಗಿತ್ತು. ಅಲ್ಲದೇ ಚೆಕ್ ಬೌನ್ಸ್ ಪ್ರಕರಣಗಳ ಸಂಬಂಧ ಸುಮಾರು 90 ಬಾರಿ ಪುನರಾವರ್ತಿತ ವಾರೆಂಟ್ ಜಾರಿ ಮಾಡಲಾಗಿದ್ದರೂ ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದರಿಂದ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಲು ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.