ಬಿಬಿಎಂಪಿ ಮುಂದೆ ಗುತ್ತಿಗೆದಾರರ ಪ್ರತಿಭಟನೆ
ಬಿಬಿಎಂಪಿ ಬಾಕಿ ಪಾವತಿಸದಿರುವುದನ್ನು ವಿರೋಧಿಸಿ ಗುತ್ತಿಗೆದಾರರು ಗುರುವಾರ ಪಾಲಿಕೆ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು...
ಬೆಂಗಳೂರು: ಬಿಬಿಎಂಪಿ ಬಾಕಿ ಪಾವತಿಸದಿರುವುದನ್ನು ವಿರೋಧಿಸಿ ಗುತ್ತಿಗೆದಾರರು ಗುರುವಾರ ಪಾಲಿಕೆ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು.
ಗುತ್ತಿಗೆದಾರರಿಗೆ ಸುಮಾರು ರು.1500 ಕೋಟಿ ರೂ. ಬಾಕಿ ಬರಬೇಕಿದ್ದು, ಕಳೆದ ನವೆಂಬರ್‍ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಮೇಯರ್ ಮಂಜುನಾಥ್ ರೆಡ್ಡಿ ಅವರು 10 ದಿನದ ಗಡುವು ಪಡೆದು, ಮೊದಲ ಹಂತದಲ್ಲಿ ರು.150 ಕೋಟಿ ರೂ.ಗಳನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ತಾವು ನಿಡಿದ ಭರವಸೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಪಾಲಿಕೆ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಸಮಾಧಾನ ಪಡೆಸಲು ಮುಂದಾದ ಪಾಲಿಕೆ ಆಯುಕ್ತ ಜಿ.ಕುಮಾರ ನಾಯಕ್, ಬಿಲ್ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಮುಖ್ಯ ಲೆಕ್ಕಾಧಿಕಾರಿಗಳನ್ನು ಗುತ್ತಿಗೆದಾರರ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡರು. ಎಲ್ಲಾ ಗುತ್ತಿಗೆದಾರರಿಗೂ ಒಂದೇ ಬಾರಿ ಬಾಕಿ ಪಾವತಿಸುವುದು ಕಷ್ಟವಾಗುವುದರಿಂದ ಪಾಲಿಕೆಗೆ ಬರುವ ಆದಾಯವನ್ನು ಪರಿಗಣಿಸಿ, ಹಂತ ಹಂತವಾಗಿ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಿತ್ಯ ವರದಿ ನೀಡಬೇಕು ಎಂದು ಆಯುಕ್ತರು ಸೂಚಿಸಿದರು.