ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಶುಕ್ರವಾರ (ಡಿ.18) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಶ್ರೀರಾಂಪುರ ನಿವಾಸಿ ಶಿವರಾಜು (23) ಮೃತ ವ್ಯಕ್ತಿ. ಡಿ.12 ರಂದು ರಾತ್ರಿ 8.45ರ ಸುಮಾರಿನಲ್ಲಿ ಸ್ವತಂತ್ರಪಾಳ್ಯದಲ್ಲಿ ಶಿವರಾಜು, ಕೋಳಿ ಮಂಜ (20) ಹಾಗೂ ಶಿವ (19) ಮದ್ಯದ ಅಮಲಿನಲ್ಲಿ ಬೀದಿಯಲ್ಲಿ ಜೂಜಾಡುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಮೂವರು ಸ್ನೇಹಿತರ ನಡುವೆ ಜಗಳ ಏರ್ಪಟ್ಟಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈೂ ವೇಲೆ ಕೋಳಿ ಮಂಜ ಚಾಕು ತೆಗೆದು ಶಿವರಾಜುವಿಗೆ ಇರಿದು ಗಾಯಗೊಳಿಸಿದ್ದ. ಬಳಿಕ ಈತ ಮತ್ತು ಸ್ನೇಹಿತ ಶಿವ ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಶಿವರಾಜುನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಜು ಶುಕ್ರವಾರ ಮಧ್ಯಾಹ್ನ 12ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಶ್ರೀರಾಂಪುರ ಪೊಲೀಸರು ಡಿ.14ರಂದು ಪ್ರಮುಖ ಆರೋಪಿ ಕೋಳಿ ಮಂಜನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶಿವನ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಹಾಡಹಗಲೇ ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ವಿಜಯನಗರದ 3ನೇ ಮುಖ್ಯರಸ್ತೆಯಲ್ಲಿ ವಾಸವಾಗಿರುವ ಎಸ್ ಬಿಐ ಬ್ಯಾಂಕ್ ನಿವೃತ್ತ ಮಾ್ಯನೇಜರ್ ರಾಮಚಂದ್ರಯ್ಯ(69) ಅವರು ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಶಾಪಿಂಗ್ ಗೆ ತೆರಳಿದ್ದರು. ಈ ವೇಳೆ ಮನೆ ಬಾಗಿಲು ಮುರಿದು ಒಳಗೆ ನುಗ್ಗಿರುವ ದುಷ್ಕರ್ಮಿಗಳು 200 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಮನೆಗೆ ವಾಪಸಾದಾಗ ಕಳ್ಳತನ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.