ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾನಸಿಕ ಆರೋಗ್ಯ ನೀತಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾನಸಿಕ ಆರೋಗ್ಯ ನೀತಿ ಸಿದ್ದಪಡಿಸುವ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಮ್ಹಾನ್ಸ್‍ನಲ್ಲಿ ನಡೆದ ಮಾ್ಯಗ್ನೆಟೋ ಎನ್‍ಸೆಪೊ್ಲೀಗ್ರಫಿ ಸಂಶೋಧನಾ ಕೇಂದ್ರ ಹಾಗೂ ನಿಮ್ಹಾನ್ಸ್ ಪಾರಂಪರಿಕ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಆರೋಗ್ಯ ಕ್ಷೇತ್ರದಲ್ಲಿ ಮೂಡುವ ಕಾಳಜಿ ಯೂ ಮುಖ್ಯವಾದದ್ದು, ಮಾನಸಿಕ ಆರೋಗ್ಯಕ್ಕಿಂತ ಶ್ರೇಷ್ಠವಾದ ಆರೋಗ್ಯ ಇನ್ಯಾವುದು ಇಲ್ಲ ಎಂಬ ಭಾವನೆ ವಿಶ್ವಾದ್ಯಂತ ಮೂಡುತ್ತಿದೆ ಎಂದು ಹೇಳಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ಜಾರಿಗೆ ಬಂದಿರುವ ಮಾನಸಿಕ ಆರೋಗ್ಯ ನೀತಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವು ಅಂಶಗಳನ್ನು ಹೊಂದಿದೆ. ನರಸಂಬಂಧಿ ಸಮಸ್ಯೆ ಹೊಂದಿರುವವರಿಗೆ ಕಾಳಜಿ ವ್ಯಕ್ತಪಡಿಸುವುದು, ಆತ್ಮಹತ್ಯೆ ಸೇರಿದಂತೆ ಅಪರಾಧ ಮುಕ್ತಿ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ 365 ಮಾನಸಿಕ ಆರೋಗ್ಯ ಯೋಜನೆಗಳು ಈ ನೀತಿಯಲ್ಲಿ ಅಡಕವಾಗಿದೆ. ಕೇಂದ್ರ, ರಾಜ್ಯ, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಸಮಾಜ ನಿರ್ವಹಿಸಬೇಕಾದ ಕರ್ತವ್ಯಗಳು ಈ ನೀತಿಯಲ್ಲಿ ಇದೆ ಎಂದು ಹೇಳಿದರು.
ಆರೋಗ್ಯ ಸಂಬಂಧಿ ನೀತಿಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಸರ್ಕಾರ ಮಾನವ ಸಂಪನ್ಮೂಲ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. ಮಾನಸಿಕ ಆರೋಗ್ಯ ನೀತಿಯ ಜಾರಿ ಸಂದರ್ಭದಲ್ಲಿ ಮಾನಸಿಕ ಅನಾರೋಗ್ಯವನ್ನು ಅನುಭವಿಸಿದ ವ್ಯಕ್ತಿಗಳು ಎದುರಿಸಿದ ಕಿರಿಕಿರಿ ಬಗ್ಗೆಯೂ ಗಮನ ಹರಿಸಬೇಕು. ಅವರು ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಈ ಸಂಬಂಧ ನಿಮ್ಹಾನ್ಸ್ ನಡೆಸಿದ ಸರ್ವೆ ಉತ್ತಮ ನಡೆಯಾಗಿದೆ. ಈ ಕ್ಷೇತ್ರದಲ್ಲಿ ನಿಮ್ಹಾನ್ಸ್ ನಡೆಸುತ್ತಿರುವ ಸಂಶೋಧನೆ ಅಪಾರ, ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಔಷಧಗಳು ಹಾಗೂ ಹೊಸ ಚಿಕಿತ್ಸಾ ಪದ್ಧತಿಗಳ ಅನ್ವೇಷಣೆಗೆ ನಿಮ್ಹಾನ್ಸ್ ಮುಂದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ನಿಮ್ಹಾನ್ಸ್ ಆರಂಭಿಸಿರುವ ಬ್ರೈನ್ ಬ್ಯಾಂಕ್, ಹೊರ ರೋಗಿ ವಿಭಾಗದಲ್ಲಿ ಕಾನೂನು ಸಲಹಾ ಕೇಂದ್ರ ತೆರೆದಿರುವುದು, ವ್ಯಸನಮುಕ್ತಿ ಕೇಂದ್ರಗಳ ಕರ್ತವ್ಯ ನಿರ್ವಹಣೆ ಶ್ಲಾಘನೀಯ. ಎಲ್ಲದಕ್ಕಿಂತ ಮುಖ್ಯವಾಗಿ ಇಲ್ಲಿ ಅತ್ಯಂತ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ. ಇದೆಲ್ಲವೂ ಶ್ಲಾಘನೀಯ ಎಂದರು. ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್‍ಕುಮಾರ್, ವೈದ್ಯ ಶಿಕ್ಷಣ ಸಚಿವ ಡಾ.ಶರಣ್‍ಪ್ರಕಾಶ್ ಪಾಟೀಲ್, ನಿಮ್ಹಾನ್ಸ್ ನಿರ್ದೇಶಕ ಡಾ.ಶರತ್‍ಚಂದ್ರ
ಉಪಸ್ಥಿತರಿದ್ದರು.
ಏಮ್ಸ್ ಮಾದರಿ ಆಸ್ಪತ್ರೆ ನೀಡಿ
ರಾಜ್ಯಕ್ಕೆ ದೆಹಲಿಯ ಏಮ್ಸ್ ಮಾದರಿ ಆಸ್ಪತ್ರೆ ಮಂಜೂರು ಮಾಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಿಮ್ಹಾನ್ಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಅವರು, ಏಮ್ಸ್ ಮಾದರಿಯ ಆಸ್ಪತ್ರೆಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಬೇಕು.
ಇದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳಿಗೆ ನೆರವು ನೀಡುವುದಕ್ಕೆ ಸಾಧ್ಯವಾಗುವುದು ಮಾತ್ರವಲ್ಲ, ಸಂಶೋಧನೆ ಹಾಗೂ ವಿವಿಧ ಆಸ್ಪತ್ರೆಗಳ ಮಧ್ಯೆ ಸಂಪರ್ಕ-ಸಂವಹನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು. ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ನೆರವನ್ನು ರಾಜ್ಯ ಸರ್ಕಾರ ನೀಡುತ್ತದೆ. ಈಗಾಗಲೇ 40 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಕೇಂದ್ರ ಸರ್ಕಾರ ಅಗತ್ಯ ಅನುದಾನ ಮಂಜೂರು ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ನಡ್ಡಾ ಅವರಿಗೆ ಮನವಿ ಮಾಡಿದರು.