ಬೆಂಗಳೂರು: ಹುಟ್ಟುಹಬ್ಬದ ದಿನ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಸಂಭ್ರಮಾಚರಿಸುವುದು ಸಾಮಾನ್ಯ, ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಹುಟ್ಟುಹಬ್ಬದ ದಿನ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಮಹಿಳೆಯರ ಯುವತಿಯರ ಫೋಟೋ ತೆಗೆದಿದ್ದಾನೆ. ಈತನನ್ನು ಗಮನಿಸಿದ ಪತ್ರಕರ್ತೆಯೊಬ್ಬರು ಫೋಟೋ ಸಮೇತ ವ್ಯಕ್ತಿಯನ್ನು ಹಿಡಿದಿದ್ದಾರೆ.
ಕೋಲ್ಕತಾ ಮೂಲದ ಮನೋಜ್ ರಾಯ್ (40) ಪತ್ರಕರ್ತೆಗೆ ಸಿಕ್ಕಿಬಿದ್ದವನು. ಅವಿವಾಹಿತನಾಗಿರುವ ಈತ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ವಾಸವಿದ್ದಾನೆ. ಕಳೆದ ಆರು ವರ್ಷಗಳ ಕಾಲ ಚೆನ್ನೈನಲ್ಲಿ ಕಾರ್ಯನಿರ್ವಹಿಸಿರುವ ಈತ ಕೆಲ ತಿಂಗಳ ಹಿಂದೆಯಷ್ಟೇ ನಗರದಲ್ಲಿ ಉದ್ಯೋಗಕ್ಕೆ ಸೇರಿದ್ದ. ಶನಿವಾರ (ಡಿ.26) ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಫೋ ಟೋ ಕ್ಲಿಕ್ಕಿಸಿ ಸಿಕ್ಕಿ ಬಿದ್ದಿದ್ದಾನೆ.
ಆರೋಪಿ ಮನೋಜ್ ರಾಯ್ ನನ್ನು ಫೋಟೋ ಸಮತೇ ಹಿಡಿದ ಘಟನೆ ಕುರಿತು 25 ವರ್ಷದ ಯುವ ಪತ್ರಕರ್ತೆಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದೀರ್ಘವಾಗಿ ಬರೆದು ಪೊಸ್ಟ್ ಮಾಡಿದ್ದಾರೆ. ಶನಿವಾರ ಸಂಜೆ 4.45ರ ಸುಮಾರಿಗೆ ಮೂವರು ಸ್ನೇಹಿತರೊಂದಿಗೆ ಶಾಪಿಂಗ್ ಮಾಡಲು ಕಮರ್ಷಿಯಲ್ ಸ್ಟ್ರೀಟ್ ಗೆ ಹೋಗಿದ್ದೆ. ಈ ವೇಳೆ ಎದುರಿನಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಫೋನ್ ಫ್ಲ್ಯಾಶ್ ಆನ್ ಆಡದೇ ಫೋಟೋ ಕ್ಲಿಕ್ಕಿಸಿದಂತೆ ಭಾಸವಾಯಿತು.
ಇದಕ್ಕೆ ಪೂರಕವಾಗಿ ಆತ ಮೊಬೈಲ್ ಫೋನ್ ಅನ್ನು ಎದೆ ಮಟ್ಟದಲ್ಲಿ ಹಿಡಿದಿದ್ದ. ಇದರಿಂದ ಅನುಮಾನಗೊಂಡು ಅವನತ್ತ ತೆರಳಿದೆ. ಇದನ್ನು ಗಮನಿಸಿದ ಆತ ಮುಂದೆ ಹೋಗಲು ಪ್ರಯತ್ನಿಸಿದ. ಈ ವೇಳೆ ಧೈರ್ಯದಿಂದ ಅವನನ್ನು ಹಿಂಬಾಲಿಸಿ ಕೈಯಲ್ಲಿದ್ದ ಫೋನ್ ಕಸಿದುಕೊಂಡು ಗ್ಯಾಲರಿ ನೋಡಿದಾಗ ನನ್ನದು ಸೇರಿದಂತೆ ಮಹಿಳೆಯರ ಮತ್ತು ಯುವತಿಯರ ಸುಮಾರು 25 ಫೋಟೋಗಳ ಕಂಡು ಆಶ್ಚರ್ಯವಾಯಿತು. ಇದರಿಂದ ಕೋಪ ನೆತ್ತಿಗೇರಿ ಆತನೊಂದಿಗೆ ಕೂಗಾಡಲು ಆರಂಭಿಸಿದೆ.
ಯಾವ ಕಾರಣಕ್ಕಾಗಿ ಫೋಟೋ ಕ್ಲಿಕ್ಕಿಸಿದ್ದೀಯಾ ಎಂದು ಪ್ರಶ್ನಿಸಿದೆ. ಅಷ್ಟರಲ್ಲಿ ಸಮೀಪದಲ್ಲಿದ್ದ ಸಂಚಾರಿ ಪೊಲೀಸ್ ಪೇದೆಯೊಬ್ಬರು ಸ್ಥಳಕ್ಕಾಗಮಿಸಿದರು. ವಿಷಯ ತಿಳಿದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಮಾಹಿತಿ ನೀಡಿದರು. ಇದಾದ ಕೆಲ ಹೊತ್ತಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಮನೋಜ್ ರಾಯ್ ನನ್ನು ವಶಕ್ಕೆ ಪಡೆದು ತೆರಳಿದರು' ಎಂದು ಘಟನೆಯನ್ನು ವಿವರಿಸಿದ್ದಾರೆ.
`ಈ ರೀತಿಯ ಘಟನೆಗಳು ನಡೆದ ಸಂದರ್ಭದಲ್ಲಿ ಕೆಲ ಮಹಿಳೆಯರು ಮತ್ತು ಯುವತಿಯರು ಘಟನೆಯನ್ನು ಬೆಳೆಸಲು ಇಚ್ಛಿಸದೆ ಮೌನ ವಹಿಸಿ ಬಿಡುತ್ತಾರೆ. ಇದು ನಿಜಕ್ಕೂ ತಪ್ಪು. ಇಂತಹ ಘಟನೆಗಳು ಘಟಿಸಿದಾಗ ಧೈರ್ಯವಾಗಿ ಎದುರಿಸಬೇಕು. ಆಗ ಮಾತ್ರ ಇಂತಹ ಘಟನೆಗಳು ಕಡಿಮೆಯಾಗುತ್ತವೆ' ಎಂದು ಪತ್ರಕರ್ತೆ ತಿಳಿಸಿದ್ದಾರೆ.
`ಅವಿವಾಹಿತನಾಗಿರುವ ಆರೋಪಿ ಮನೋಜ್ ರಾಯ್ ಕೊಂಚ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ. ಈತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಯಾವುದೇ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಕಂಡುಬಂದಿಲ್ಲ. ಇನ್ನು ಈತನ ಪೂರ್ವಪರ ವಿಚಾರಿಸಿದಾಗ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬುದು ತಿಳಿದಿದೆ.
ಘಟನೆಗೆ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಚ್ಚರಿಕೆ ಕೊಟ್ಟು ಬಿಡುಗಡೆಗೊಳಿಸಿದ್ದೇವೆ' ಎಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತಿಳಿಸಿದರು.