ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಜವಾಬ್ದಾರಿ ಅರಿತು ಕೆಲಸ ಮಾಡಿ: ಡಾ.ಜಿ. ಪರಮೇಶ್ವರ್

ಪೊಲೀಸರು ತಮ್ಮ ಜವಾಬ್ದಾರಿ ಅರಿತು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇ ಕೆಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು...

ಬುಧವಾರ ಅಪರಾಧ ತಡೆ ಮಾಸಾಚರಣೆ ಸಮಾರೋಪ ಆರಂಭಕ್ಕೂ ಮುನ್ನ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಗೌರವ ವಂದನೆ ಸ್ವೀಕರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳ ಕೈ ಕುಲುಕಿದ
Manjula VN
Updated On : 31 Dec 2015, 11:56 am

ಬೆಂಗಳೂರು: ಪೊಲೀಸರು ತಮ್ಮ ಜವಾಬ್ದಾರಿ ಅರಿತು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕೆಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಸಮಾರೋಪದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಈಗಾಗಲೇ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದೆ. ಹೀಗಾಗಿ ಇಲ್ಲಿರುವ ಅನೇಕ ಸವಾಲುಗಳನ್ನು ಮನಗಂಡು ಪೊಲೀಸರು ಕಾರ್ಯನಿರ್ವಹಿಸಬೇಕು.

ಅಪರಾಧ ಪ್ರಕರಣಗಳ ನಿಯಂತ್ರಣದೊಂದಿಗೆ ಇಲ್ಲಿನ ನಾಗರಿಕರು ಮತ್ತು ಅವರ ಆಸ್ತಿಪಾಸ್ತಿಗಳು ರಕ್ಷಿಸಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಅದು ಅನಿವಾರ್ಯ. ಹಾಗಾಗಿ ಪೊಲೀಸರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

60ರ ದಶಕದ ಬೆಂಗಳೂರಿಗೂ ಇಂದಿನ ನಗರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜನಸಂಖ್ಯೆ, ವಾಹನ, ರಸ್ತೆ ಹೀಗೆ ಎಲ್ಲದರ ಚಿತ್ರಣ ಬದಲಾಗಿದೆ. ಇಂದು ನಗರ ಸಂಚಾರ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ಇನ್ನು ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಮತ್ತು ಸಲಕರಣೆಗಳ ಕೊರತೆ ಇದೆ. ಹಾಗಂತ ಸುಮ್ಮನೆ ಕೂರಲು ಸಾಧ್ಯವಿಲ್ಲ. ಕಳೆದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಗೃಹ ಇಲಾಖೆಗೆ ಹೆಚ್ಚಿನ ಹಣ ನೀಡಿದ್ದರು. ಮುಂದಿನ ಬಜೆಟ್‍ನಲ್ಲೂ ಹೆಚ್ಚಿನ ಹಣ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳ ಜನ ನೆಲೆಸಿದ್ದಾರೆ. ಇದರಿಂದ ನಗರವನ್ನು ಕಾಸ್ಮೋಪಾಲಿ ಟನ್ ಸಿಟಿ ಎಂದು ಕರೆಯಲಾಗುತ್ತಿದೆ. ಇಲ್ಲಿ ಉಗ್ರರ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಏನೇ ಇದ್ದರೂ ಉದಾಸೀನ ಮಾಡದೆ ಎಚ್ಚರಿಕೆಯಿಂದ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು.

ಯಾವುದೇ ಕಾರಣಕ್ಕೂ ಕೋಮು ಸಂಘರ್ಷಕ್ಕೆ ಅವಕಾಶ ನೀಡಬಾರದು. ನಗರದ ಪೊಲೀಸರ ಮೇಲೆ ಸಾರ್ವಜನಿಕರು ಕಣ್ಣಿಟ್ಟಿದ್ದಾರೆ. ಕೆಲ ಪೊಲೀಸರ ಮೇಲೆ ಲಂಚದ ಆರೋಪವೂ ಕೇಳಿಬಂದಿದೆ. ಇಂತವರ ಮೇಲೆ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವರು ಎಚ್ಚರಿಸಿದರು.

ರು.18 ಸಾವಿರ ಕೋಟಿ ವೆಚ್ಚದ ಕಾರಿಡಾರ್: ನಗರದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಸುಮಾರು ರು.18 ಸಾವಿರ ಕೋಟಿ ವೆಚ್ಚದಲ್ಲಿ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣದಲ್ಲಿ ಎರಡು ಕಾರಿಡಾರ್ ನಿರ್ಮಿಸಲು ನಿರ್ಧರಿಸಿ ಈ ಸಂಬಂಧ ಡಿಪಿಆರ್ ಸಿದ್ಧವಾಗುತ್ತಿದೆ. ಇನ್ನು ನಗರದ ವಿವಿಧೆಡೆ 50 ಫ್ಲೈ ಒವರ್ ನಿರ್ಮಿಸುವ ಸಂಬಂಧ ಬಿಬಿಎಂಪಿ ಜತೆಗೆ ಚರ್ಚಿಸಲಾಗುತ್ತಿದೆ. ಈ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದೆಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಹೆಚ್ಚುವರಿ (ಸಂಚಾರ) ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೇರಿದಂತೆ ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement