ಬೆಂಗಳೂರು: ಭಾರತ ಹಾಗೂ ಫ್ರಾನ್ಸ್ ದೇಶಗಳ ಸಂಬಂಧಕ್ಕೆ 60 ವರ್ಷಗಳ ಇತಿಹಾಸವಿದ್ದು, `ಮೇಕ್ ಇನ್ ಇಂಡಿಯಾ ಅಭಿಯಾನ ಮೂಲಕ ಆ ಸಂಬಂಧಕ್ಕೆ ಮರುಜೀವ ಬಂದಂತಾಗಿದೆ ಎಂದು ಫ್ರಾನ್ಸ್ ನ ಬೆಂಗಳೂರು ದೂತಾವಾಸದ ಅಧಿಕಾರಿ ಎರಿಕ್ ಲ್ಯಾವೆರ್ಟು ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಗುರುವಾರ ಆಯೋಜಿಸಿದ್ದ `ಮೇಕ್ ಇನ್ ಇಂಡಿಯಾ' ಅಭಿಯಾನದಲ್ಲಿ ಮಾತನಾಡಿದರು. 60 ವರ್ಷಗಳ ಹಿಂದೆ ಉಭಯ ದೇಶಗಳ ನಡುವೆ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಕೊಡುಕೊಳ್ಳುವಿಕೆ ಇತ್ತು. ಈ ಅಭಿಯಾನದಿಂದ ಎರಡೂ ದೇಶಗಳ ನಡುವೆ ವ್ಯಾಪಾರ ವಹಿವಾಟಿನ ಅಭಿವೃದ್ಧಿ ಹಾಗೂ ಮಾಹಿತಿಗಳ ವಿನಿಮಯವಾಗಲಿದೆ. ಫ್ರಾನ್ಸ್ ದೇಶದವರು ಭಾರತದಲ್ಲಿ 66 ಸಾವಿರ ಮಂದಿ ಉದ್ಯೋಗಿಗಳಿದ್ದು, ಬೆಂಗಳೂರಿನಲ್ಲೇ 18 ಸಾವಿರ ಮಂದಿಯಿದ್ದಾರೆ ಎಂದು ಮಾಹಿತಿ ನೀಡಿದರು.
ಎಫ್ ಕೆಸಿಸಿಐ ಅಧ್ಯಕ್ಷ ಸಂಪತ್ ರಾಮನ್ ಮಾತನಾಡಿ ಮೇಕ್ ಇನ್ ಇಂಡಿಯಾ ಅಭಿಯಾನಕ್ಕಾಗಿ ಆಟೋಮೊಬೈಲ್, ಕೆಮಿಕಲ್ಸ್, ಜವಳಿ ಕ್ಷೇತ್ರ ಒಳಗೊಂಡಂತೆ 25 ವಲಯಗಳನ್ನು ಆಯ್ಕೆ ಮಾಡಲಾಗಿದೆ. ಪುನರ್ ನವೀಕರಣ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ ಎಂದರು.
ಹಿರಿಯ ಉಪಾಧ್ಯಕ್ಷ ತಲ್ಲಂ ಆರ್. ದ್ವಾರಕಾನಾಥ್, ಉಪಾಧ್ಯಕ್ಷ ಎಂ.ಸಿ. ದಿನೇಶ್ ಉಪಸ್ಥಿತರಿದ್ದರು.