ಸಂಸ್ಕೃತದಿಂದ ಉತ್ತಮ ಸಂಸ್ಕಾರ
ಸಂಸ್ಕೃತವನ್ನು ಕಲಿತು ಮೂಲ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಸಂಸ್ಕಾರ..
ಬೆಂಗಳೂರು: ಸಂಸ್ಕೃತವನ್ನು ಕಲಿತು ಮೂಲ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕೆಂದು ರಾಮಕೃಷ್ಣ ಆಶ್ರಮದ ಶ್ರೀ ಹರ್ಷಾನಂದ ಮಹಾರಾಜ್ ಕರೆ ನೀಡಿದರು.
ಶನಿವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸಂಸ್ಕೃತ ಗಂಗಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಮಾಯಣ, ಭಗವದ್ಗೀತೆ, ಉಪನಿಷತ್ ಸೇರಿದಂತೆ ಯಾವುದೇ ಧಾರ್ಮಿಕ ಗ್ರಂಥಗಳು ಸಂಸ್ಕೃತದಲ್ಲಿ ರಚನೆಗೊಂಡಿವೆ. ಮೂಲಗ್ರಂಥವನ್ನಾಧರಿಸಿ ಉಳಿದ ಭಾಷೆಗಳಲ್ಲಿ ಗ್ರಂಥಗಳು ಬಂದಿವೆ. ಮೂಲಗ್ರಂಥವನ್ನು ಅಧ್ಯಯನ ಮಾಡುವುದರಿಂದ ಗ್ರಂಥದ ಆಶಯ ಹಾಗೂ ಸಮಗ್ರ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು.
ಸಂಸ್ಕೃತ ಭಾಷೆ ಗಂಗಾ ನದಿಯಂತೆ ಪವಿತ್ರವಾದುದು, ದೈವಿಕ ಭಾಷೆ ಎಂದೇ ಪರಿಗಣಿಸಲ್ಪಟ್ಟಿದೆ. ಇಂತಹ ಭಾಷೆ ಕಲಿತು ಜ್ಞಾನದ ಪರಿಧಿ ಹೆಚ್ಚಿಸಿಕೊಳ್ಳಬೇಕು. ಶಾಸ್ತ್ರಗಳನ್ನು ಕಲಿತಾಗ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ಲೌಕಿಕ ಹಾಗೂ ಆಧ್ಯಾತ್ಮದಲ್ಲಿ ತಲೆದೋರುವ ಅನೇಕ ಸವಾಲುಗಳಿಗೆ ಸಮರ್ಪಕ ಉತ್ತರವೂ ದೊರೆಯುತ್ತದೆ ಎಂದರು.
ಕವಿ ಡಾ. ದೊಡ್ಡರಂಗೇಗೌಡ ಮಾತನಾಡಿ, ಬುದ್ಧಿಜೀವಿಗಳು ಆಂಗ್ಲಭಾಷೆಯ ಪರ ನಿಂತು ಸಂಸ್ಕೃತವನ್ನು ವಿರೋಧಿಸುತ್ತಿದ್ದಾರೆ. ಅವರ ನಿಲುವು ಬದಲಾಗಬೇಕಿದೆ. ಎಡಪಂಥೀಯರು ಸಂಸ್ಕೃತವನ್ನು ವಿರೋಧಿಸುವುದು ಸರಿಯಲ್ಲ. ಅಧ್ಯಯನ ಕೈಗೊಂಡು ಸತ್ಯಾಂಶ ತಿಳಿಯಬೇಕು. ಸಂಸ್ಕೃತ ಜ್ಞಾನದ ಸಾಗರ. ಸಂಸ್ಕೃತದಲ್ಲಿರುವ ಪಾಣಿನಿಯ ವ್ಯಾಕರಣ ಗ್ರಂಥ ಸರ್ವಶ್ರೇಷ್ಠವಾದುದು. ಸಂಸ್ಕಡತ ವೇದ ಗಣಿತವನ್ನು ಒಳಗೊಂಡಿದೆ. ರವೀಂದ್ರ ನಾಥ್ ಠಾಗೋರ್ ಸಂಸ್ಕೃತ ರಕ್ಷಾ ಎನ್ನುವ ಪುಸ್ತಕ ಬರೆಯುವ ಮೂಲಕ ಅದರ ಮಹತ್ವ ತಿಳಿಸಿದ್ದಾರೆ ಎಂದು ಹೇಳಿದರು.
ದಿನೇಶ್ ಕಾಮತ್ ಮಾತನಾಡಿ 1ನೇ ತರಗತಿಯಿಂದ ಸಂಸ್ಕೃತ ಕಲಿಸಲು ಖಾಸಗಿ ಶಾಲೆಗಳು ಮುಂದಾಗಬೇಕು. ಇಂಗ್ಲಿಷ್ ಭಾಷೆಯನ್ನು ಕಲಿಸುವಲ್ಲಿ ಈ ಶಾಲೆಗಳು ಆಸಕ್ತಿ ತೋರುವಂತೆ ನಮ್ಮ ಪ್ರಾಚೀನ ಭಾಷೆ ಕಲಿಸುವತ್ತಲೂ ಗಮನ ಹರಿಸಬೇಕು. ವಿದೇಶಿಯರು ಸಹ ಸಂಸ್ಕೃತವನ್ನು ಪರಿಪೂರ್ಣ ಭಾಷೆ ಎಂದು ಒಪ್ಪಿದ್ದಾರೆ. ಸಂಸ್ಕೃತ ಕೇವಲ ಬ್ರಾಹ್ಮಣರಿಗೆ ಸೀಮಿತವಾದ ಭಾಷೆಯಲ್ಲ. ಎಲ್ಲರೂ ಕಲಿತು ಅದರಲ್ಲಿರುವ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ಸಂಸ್ಕೃತ ಹಳತು, ಇಂದಿನ ವೇಗಕ್ಕೆ ಹೊಂದುವುದಿಲ್ಲ ಎನ್ನುವರು.
ಆದರೆ, ಅದು ಮಂಗಳಯಾನದ ವೇಗಕ್ಕೂ ಹೊಂದುತ್ತದೆ ಎಂದರು. ನಮ್ಮ ಭಾಷೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಕೃತ ಕಲಿಯುವ ಅನಿವಾರ್ಯತೆ ಇದೆ. ಸಂಸ್ಕೃತ ಎಲ್ಲ ಭಾಷೆಗಳನ್ನು ಒಗ್ಗೂಡಿಸುತ್ತದೆ. ದೇಶದಾದ್ಯಂತ 508 ಜಿಲ್ಲೆಗಳಲ್ಲಿ ಸಂಸ್ಕೃತ ಸಮ್ಮೇಳನಗಳನ್ನು ನಡೆಸಲಾಗುವುದು. ದೇಶದಲ್ಲಿ ಸಂಸ್ಕೃತ ಕಲಿಕಾ ಆಂದೋಲನವಾಗಬೇಕು. ದೇವಾಲಯದ ಆಡಳಿತ ಮಂಡಳಿಗಳು ಈ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಡುಗೆ ನೀಡಬೇಕು ಎಂದು ಆಗ್ರಹಿಸಿದರು.