ಬುದ್ದಿ ಹೇಳಿದ್ದಕ್ಕೆ ಮಹಿಳೆ ಕೈ ಕತ್ತರಿಸಿದರು..!
ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಬುದ್ಧಿವಾದ ಹೇಳಿದ ಮನೆ ಮಾಲಕಿಯ ಕೈಯನ್ನೇ ಕತ್ತರಿಸಿಹಾಕಿದ ಬೀಭತ್ಸ ಘಟನೆ ಬೆಂಗಳೂರಿನಲ್ಲಿ ನಡೆದಿದೆ...
ಬೆಂಗಳೂರು: ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ವ್ಯಕ್ತಿಗಳಿಗೆ ಬುದ್ಧಿವಾದ ಹೇಳಿದ ಮನೆ ಮಾಲಕಿಯ ಕೈಯನ್ನೇ ಕತ್ತರಿಸಿಹಾಕಿದ ಬೀಭತ್ಸ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೊರವಲಯದ ಮಾಗಡಿ ರಸ್ತೆ ಬಳಿ ಇರುವ ಹೇರೋಹಳ್ಳಿಯ ಕೆಂಪೇಗೌಡ ನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮನೆ ಮಾಲಕಿ ಮಂಗಳ ಗೌರಿ ಎಂಬುವವರ ಕೈಯನ್ನು ದುಷ್ಕರ್ಮಿಗಳು ಕತ್ತರಿಸಿಹಾಕಿದ್ದಾರೆ. ಮನೆ ಮುಂದೆ ಗಲಾಟೆ ಮಾಡುತ್ತಿದ್ದ ಇಬ್ಬರು ಯುವಕರಿಗೆ ಬೈದು ಮಂಗಳಗೌರಿ ಅವರು ಬುದ್ಧಿವಾದ ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ದುಷ್ಕರ್ಮಿಗಳು ಮಾರನೆಯ ದಿನ ಆಕೆ ಮನೆಯ ಹೊರಗೆ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಕೈ ಮುಂದೆ ಮಾಡಿದಾಗ ದುಷ್ಕರ್ಮಿಗಳು ಬೀಸಿದ ಮಚ್ಚು ಅವರ ಕೈಯನ್ನೇ ಕತ್ತರಿಸಿಹಾಕಿದೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಂಗಳಗೌರಿ ಅವರನ್ನು ಅವರ ಕತ್ತರಿಸಿ ಹೋದ ಕೈ ಸಮೇತ ಸಮೀಪದ ಲಕ್ಷ್ಮಿ ಮಲ್ಟಿಸ್ಪೆಷಾಲಿಟ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳಗೌರಿ ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಅವರ ಕತ್ತರಿಸಿ ಹೋಗಿದ್ದ ಕೈಯನ್ನು ಪುನರ್ ಜೋಡಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳಗೌರಿ ಅವರ ಕೈ ಕತ್ತರಿಸಿದ ವ್ಯಕ್ತಿಗಳನ್ನು ಕೃಷ್ಣ ಮತ್ತು ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಇಬ್ಬರೂ ನಾಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ತಾವರೆಕೆರೆ ಮತ್ತು ಬ್ಯಾಟರಾಯನಪುರ ಔಟ್ ಪೋಸ್ಟ್ ಪೊಲೀಸರು ಆಗಮಿಸಿ, ಸ್ಥಳಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತಾವರೆಕೆರೆ ಪೊಲೀಸರು ಕೊಲೆ ಯತ್ನ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪರಾರಿಯಾಗಿರುವ ದುಷ್ಕರ್ಮಿಗಳಾಗಿ ಶೋಧ ನಡೆಸುತ್ತಿದ್ದಾರೆ.
ಏನಿದು ಘಟನೆ..?
ಕೆಂಪೇಗೌಡ ನಗರದಲ್ಲಿ ಮಂಗಳಗೌರಿ ಅವರ 5 ಮನೆಗಳಿದ್ದು, ಎಲ್ಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಈ ಪೈಕಿ ಒಂದು ಮನೆಯನ್ನು ಚಂದ್ರು ಎಂಬಾತನಿಗೆ ನೀಡಿದ್ದು, ಕಳೆದ ಬುಧವಾರ ರಾತ್ರಿ ಚಂದ್ರುವಿನ ಮನೆಗೆ ಕೃಷ್ಣ ಮತ್ತು ಕುಮಾರ್ ಎಂಬುವವರು ಬಂದು ಕುಡಿದು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಬಾಡಿಗೆದಾರ ಚಂದ್ರುವಿನ ಮೇಲೆ ಹಲ್ಲೆ ನಡೆಸಲು ಕೂಡ ಮುಂದಾದರು. ಈ ಜಗಳದಿಂದಾಗಿ ಅಕ್ಕಪಕ್ಕದ ಮನೆಗಳಲ್ಲಿದ್ದ ನಿವಾಸಿಗಳು ತೊಂದರೆಯಾಗುತ್ತಿತ್ತು. ಹೀಗಾಗಿ ಮಧ್ಯಪ್ರವೇಶ ಮಾಡಿದ ಮಂಗಳಗೌರಿ ಜಗಳ ಮಾಡದಂತೆ ಇಬ್ಬರಿಗೂ ಬುದ್ಧಿವಾದ ಹೇಳಿದರು.
ಅಷ್ಟಕ್ಕೂ ಸುಮ್ಮನಾಗದ ಅವರು ಮಂಗಳಗೌರಿ ಅವರ ಮೇಲೆಯೇ ಜಗಳಕ್ಕೆರಗಿದರು. ಈ ವೇಳೆ ಆಕ್ರೋಷಿತರಾದ ಮಂಗಳಗೌರಿ ಜಗಳ ಮಾಡುವುದಿದ್ದರೆ ನಿಮ್ಮ ಮನೆ ಬಳಿ ಮಾಡಿ. ಅಥವಾ ಮನೆಯೊಳಗೆ ಹೋಗಿ ಮಾಡಿಕೊಳ್ಳಿ. ನಮ್ಮ ಮನೆ ಮುಂದೆ ಮಾಡಬೇಡಿ. ಇಲ್ಲವಾದರೆ ಪೊಲೀಸ್ ಗೆ ಕರೆ ಮಾಡುವುದಾಗಿ ಹೇಳಿದರು. ಆಗ ಅಲ್ಲಿಂದ ಜಾಗ ಖಾಲಿ ಮಾಡಿ ಅದೇ ಧ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ದುಷ್ಕರ್ಮಿಗಳು ಮಾರನೆಯ ದಿನ ಅಂದರೆ ಗುರುವಾರ ಬೆಳಗ್ಗೆ ಮಂಗಳಗೌರಿ ಅವರ ಮನೆಬಳಿ ಬಂದಿದ್ದಾರೆ. ಆಗ ಮನೆಯ ಹೊರಗೆ ಏನೋ ಕೆಲಸ ಮಾಡುತ್ತಿದ್ದ ಮಂಗಳಗೌರಿ ಅವರ ಮೇಲೆ ಏಕಾಏಕಿ ಮಚ್ಚು-ಲಾಂಗುಗಳಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ತಮ್ಮ ರಕ್ಷಣೆಗಾಗಿ ಮಂಗಳಗೌರಿ ಅವರು ತಮ್ಮ ಎಡಗೈ ಚಾಚಿದ್ದು, ಆಗ ಅವರ ಕೈ ಕತ್ತರಿಸಿ ಹೋಗಿದೆ. ತೀವ್ರ ರಕ್ತ ಸ್ರಾವದಿಂದ ಅಲ್ಲೇ ಕುಸಿದ ಮಂಗಳಗೌರಿ ಅವರು ಕಿರುಚಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ದುಷ್ಕರ್ಮಿಗಳ ವಿರುದ್ಧ ತಿರುಗಿಬಿದಿದ್ದಾರೆ.
ಇದರಿಂದ ಗಾಬರಿಗೊಂಡ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಗಳಗೌರಿ ಅವರನ್ನು ಅವರ ಕತ್ತರಿಸಿಹೋಗಿದ್ದ ಕೈ ಸಮೇತ ಸಮೀಪದ ಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಮಾರು 2 ಗಂಟೆಗೂ ಅಧಿಕ ಸಮಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಂಗಳಗೌರಿ ಅವರ ಕೈಯನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ. ಇದಾಗ್ಯೂ ಅವರ ಕೈ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ಸುಮಾರು 6 ತಿಂಗಳ ಕಾಲ ಸಮಯ ಬೇಕು ಎಂದು ಹೇಳಿದ್ದಾರೆ.