ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಹಣ ಕೊಡಲು ವಿಫಲವಾಗಿರುವ ಹಿನ್ನಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಜೂನ್ 29 ರಿಂದ ಆರಂಭವಾಗುವ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿ ಕಾರಣ. ರೈತನ ಸಾವಿನ ಜೊತೆ ಸರ್ಕಾರ ಹುಡುಗಾಟವಾಡುತ್ತಿದೆ. ರಾಜ್ಯದಲ್ಲಿ ಕಬ್ಬಿನ ಬೆಲೆ ನಿಗದಿಪಡಿಸಲು ಕಬ್ಬು ನಿಯಂತ್ರಣ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದರೂ ಯಾವುದೇ ಲಾಭ ಉಂಟಾಗಿಲ್ಲ. ರಾಜ್ಯದಲ್ಲಿ ಕಬ್ಬಿನ ಕಾರ್ಖಾನೆಗಳು 2343 ಕೋಟಿ ರೂ. ಬಾಕಿ ಹಣ ಕೊಡಬೇಕಿದೆ. ವರ್ಷದಿಂದ ವರ್ಷಕ್ಕೆ ಈ ಮೊತ್ತ ಹೆಚ್ಚಾಗುತ್ತಿದೆ. ಕಾರ್ಖಾನೆ ಮಾಲೀಕರು ಹಣ ನೀಡಲು ನಿರಾಕರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರದ ಆದೇಶವನ್ನು ತಿರಸ್ಕರಿಸಿ ಕಾರ್ಖಾನೆ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿಯೂ ನ್ಯಾಯಾಲಯ ಬಾಕಿ ಹಣ ನೀಡುವಂತೆ ನಿರ್ದೇಶನ ನೀಡಿದೆ. ಉಳಿದ ಬಾಕಿ ಹಣವನ್ನು ಬಾಕಿ ಹಣವನ್ನು ಶೇ.18ರ ಬಡ್ಡಿಯೊಂದಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಕೇಂದ್ರ ಸರ್ಕಾರ ಕಾರ್ಖಾನೆಗಳ ಸಂಕಷ್ಟಕ್ಕೆ ನೆರವಾಗಲು 6000 ಕೋಟಿ ರೂ. ಬಡ್ಡಿ ರಹಿತ ನೆರವು ನೀಡಿದೆ. ಆದರೂ ಕಾರ್ಖಾನೆಗಳು ಬಾಕಿ ಹಣವನ್ನು ಇದುವರೆಗೂ ಪಾವತಿಸಿಲ್ಲ ಎಂದು ಅವರು ದೂರಿದರು.
ರಸಗೊಬ್ಬರ, ಸಾಗಾಣಿಕೆ, ರೈತನ ನಿತ್ಯ ಜೀವನದ ವೆಚ್ಚ ದುಬಾರಿಯಾಗಿರುವುದರಿಂದ ಕಬ್ಬು ನಾಟಿ ಮಾಡುವುದಕ್ಕೆ ಮುಂಚೆ ಸಲಹಾ ಬೆಲೆಯನ್ನು ಘೋಷಿಸಬೇಕು. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ತರಲು ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಲು ನಿನ್ನೆ ದಾವಣಗೆರೆಯಲ್ಲಿ ನಡೆದ ರಾಜ್ಯ ರೈತ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಬ್ಬು ಬೆಳೆಗಾರರ ಬಾಕಿ ಪಾವತಿ ಇತ್ಯರ್ಥವಾಗುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಎಂದು ಅವರು ತಿಳಿಸಿದ್ದಾರೆ.