ಬೆಂಗಳೂರು: ರಾಜ್ಯ ಸರ್ಕಾರ ಅರಣ್ಯ ಕಾಯ್ದೆ 1969ಕ್ಕೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ತಿದ್ದುಪಡಿ ತರುವ ಮುನ್ನ ಎರಡೂ ಸದನದಲ್ಲಿ ಒಪ್ಪಿಗೆ ಪಡೆಯಲಾಗಿದೆಯೇ ಎಂಬ ಮಾಹಿತಿ ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯ ಸರ್ಕಾರ ಅರಣ್ಯ ಕಾಯ್ದೆ 1969, ನಿಯಮ 163ಕ್ಕೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕಾರ ಮುನ್ಸಿಪಲ್ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಸಾ ಮಿಲ್‍ಗಳಿಗೆ ಸ್ಫಾಪನೆಗೆ ಅನುವು ಮಾಡಿಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಕೂರ್ಗ್ ವನ್ಯಜೀವಿ ಸಂಸ್ಥೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡುವ ಮುನ್ನ ಎರಡೂ ಸದನದಲ್ಲಿ ಒಪ್ಪಿಗೆ ಪಡೆದಿರುವ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಎರಡು ವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರವೀಂದ್ರ ಕಾಮತ್ ವಾದ ಮಂಡಿಸಿ, ರಾಜ್ಯ ಸರ್ಕಾರ ಒಂದೆಡೆ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ಕಡೆ ಒತ್ತು ನೀಡಬೇಕು ಎನ್ನುತ್ತದೆ. ಆದರೆ ಇನ್ನೊಂದೆಡೆ ಸಾ ಮಿಲ್‍ಗಳಿಗೆ ಅನುಮತಿ ನೀಡುವ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ವಾದ ಮಂಡಿಸಿದರು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯಾವುದೇ ಸಾ ಮಿಲ್ ಆರಂಭಕ್ಕೆ ಅನುಮತಿ ನೀಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿತ್ತು. ಅಲ್ಲದೇ ಮೀಸಲು ಅರಣ್ಯ ಪ್ರದೇಶದ ಸುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಸಾ ಮಿಲ್ ಗಳನ್ನು ಸ್ಥಾಪಿಸಬಾರದು ಎಂದಿತ್ತು. ಆದರೆ, ರಾಜ್ಯ ಸರ್ಕಾರ ತಿದ್ದುಪಡಿ ಮಾಡಿರುವ ನಿಯಮದ ಪ್ರಕಾರ ಸಾ ಮಿಲ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ.
ಅಲ್ಲದೇ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಜಾಗದಲ್ಲಿ ಸಾ ಮಿಲ್‍ಗಳಿಗೆ ಅನುಮತಿ ನೀಡಲು ಸಹ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿದೆ. ಮಾತ್ರವಲ್ಲದೇ ಇದರಿಂದ ಮರಗಳ ಕಳ್ಳಸಾಗಾಣೆಗೆ ಅನುವು ಮಾಡಿಕೊಟ್ಟಂತಾಗಿದ್ದು, ಅರಣ್ಯ ಪರಿಸರ ಮತ್ತು ಪ್ರಾಣಿ ಸಂಕುಲಗಳ ಮೇಲೆ ಇದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.