ಎಲ್ಲ ಶಾಸಕರೂ ನಿದ್ರೆ ಮಾಡ್ತಾರೆ!
ಸದನದಲ್ಲಿ ನಾನು ಮಾತ್ರ ನಿದ್ರೆ ಮಾಡೋದಲ್ಲ, ಎಲ್ಲ 224 ಶಾಸಕರೂ ನಿದ್ರೆ ಮಾಡುತ್ತಾರೆ. ಆದರೆ ಮಾಧ್ಯಮಗಳು ನನ್ನನ್ನು ಮಾತ್ರ ತೋರಿಸಿವೆ...
ಮಂಗಳೂರು: ಸದನದಲ್ಲಿ ನಾನು ಮಾತ್ರ ನಿದ್ರೆ ಮಾಡೋದಲ್ಲ, ಎಲ್ಲ 224 ಶಾಸಕರೂ ನಿದ್ರೆ ಮಾಡುತ್ತಾರೆ. ಆದರೆ ಮಾಧ್ಯಮಗಳು ನನ್ನನ್ನು ಮಾತ್ರ ತೋರಿಸಿವೆ. ನನಗೆ ಅವಕಾಶ ಕೊಡಿ, ಬೇಕಾದರೆ ನಾನು ಎಲ್ಲರೂ ನಿದ್ರೆ ಮಾಡುವ ಫೋಟೋವನ್ನು ನಿಮಗೆ ಒದಗಿಸುತ್ತೇನೆ. ಯೋಗ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ ಗರಂ ಆಗಿ ಉತ್ತರಿಸಿದ ರೀತಿ ಇದು.
ನಾನು ಬೆಳಗ್ಗೆ ನಿತ್ಯ 2 ಗಂಟೆ ದೈಹಿಕ ಕಸರತ್ತು ಮಾಡುತ್ತೇನೆ. ಇದರಿಂದ ತನ್ನ ತೂಕ 126 ಕೆ.ಜಿಯಿಂದ 99 ಕೆ.ಜಿ.ಗೆ ಇಳಿದಿದೆ. ದಿನದಲ್ಲಿ 3 ವಿಧದ ಮಾತ್ರೆ ಬದಲು ಬಿಪಿಗೆ ಮಾತ್ರ 1 ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. 20 ವರ್ಷದಿಂದ ಮಾಂಸಾಹಾರ(ಮೀನು ಬಿಟ್ಟು) ತ್ಯಜಿಸಿದ್ದು, ಸಸ್ಯಾಹಾರಿಯಾಗಿದ್ದೇನೆ. ದೈಹಿಕ ಕಸರತ್ತಿನ ಪರಿಣಾಮ ಸಂಜೆ 5 ಗಂಟೆ ವರೆಗೆ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ. ನಂತರ ಸಹಜವಾಗಿ ಬಳಲಿಕೆಯಿಂದ ಜೋಂಪು ಬರುತ್ತದೆ. ಇದಕ್ಕೆ ನಾನೇನೂ ಮಾಡಲಾಗುವುದಿಲ್ಲ. ನಿದ್ರೆ ಮಾಡುತ್ತೇನೆ ಎಂದು ಹೇಳುವವರು ಹೇಳಲಿ ಎಂದು ಸಮಜಾಯಿಷಿ ನೀಡಿದರು.
ಭಾನುವಾರ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಅವರು ಮೂರು ಗಂಟೆ ಯೋಗ ಮಾಡಿದರು.