ಬೆಳಗಾವಿ: ಚಳಿಗಾಲದ ವಿಧಾನಮಂಡಳದ ಅಧಿವೇಶನಕ್ಕೆ ಸೀಮಿತವಾಗಿದ್ದ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣವಿಧಾನಸೌಧ ಈ ಬಾರಿ ಮಳೆಗಾಲದ ಅಧಿವೇಶನಕ್ಕೆ ಸಜ್ಜಾಗುತ್ತಿದೆ.
ಆದರೆ, ಪ್ರತಿ ಬಾರಿ ಇಲ್ಲಿ ಊಟದ್ದೇ ತಕರಾರು ಕೇಳಿ ಬರುತ್ತಿತ್ತು. ಏನೇ ಸರಿಯಾದ್ರೂ ಇವರಿಗೆ ಊಟ ಮಾತ್ರ ರುಚಿಸುತ್ತಿರಲಿಲ್ಲ. ಈ ಬಾರಿ ಇಂಥವರತ್ತಲೂ ಗಮನ ಹರಿಸಲಾಗಿದೆ. ಹೌದು. ಈ ಬಾರಿ ಮಳೆಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಚಿವರು, ಗಣ್ಯರು ಮತ್ತು ಅಧಿಕಾರಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದೆ. ಇವರು ಉತ್ತರ ಕರ್ನಾಟಕ ಶೈಲಿಯ ರೊಟ್ಟಿ ಊಟದ ಜತೆಗೆ ರಾಗಿ ಮುದ್ದೆ ಮತ್ತು ಸಾಂಬಾರನ್ನೂ ಸವಿಯ ಬಹುದಾಗಿದೆ.
ಕಳೆದ ಚಳಿಗಾಲದ ಅಧಿವೇಶನದ ವೇಳೆ ಇಲ್ಲಿಗೆ ಬರುತ್ತಿದ್ದ ದಕ್ಷಿಣ ಕರ್ನಾಟಕದ ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈ ಭಾಗದ ಭೋಜನ ಸೇರುತ್ತಿರಲಿಲ್ಲ. ಈ ಬಗ್ಗೆ ಅವರ ದೂರು ಸಾಮಾನ್ಯವಾಗಿತ್ತು. ಹೀಗಾಗಿ ಈ ಬಾರಿ ಊಟದ ಮೆನುವಿನಲ್ಲಿ ರಾಗಿ ಮುದ್ದೆ ಮತ್ತು ಸಾಂಬಾರು ಸೇರ್ಪಡೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಬಿ. ದಾಮನ್ನವರ ತಿಳಿಸಿದ್ದಾರೆ. ಉತ್ತರ ಕರ್ನಾಟಕದ ಶೈಲಿಯ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಕೋಸಂಬರಿ, ಎಣ್ಣೆಗಾಯಿ ಬದನೆಕಾಯಿ, ಗುರೆಳ್ಳ ಚಟ್ನಿ, ಶೇಂಗಾ ಚಟ್ನಿ, ಅನ್ನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸರಳ ಊಟದ ವ್ಯವಸ್ಥೆಯೂ ಇದೆ.