ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ದಿನಾಂಕದ ವೇಳಾ ಪಟ್ಟಿ ಘೋಷಿಸಲು ಸರ್ಕಾರ ಹಾಗೂ ಬಿಬಿಎಂಪಿಗೆ ಕನಿಷ್ಟ ಇನ್ನೆಷ್ಟು ಕಾಲಾವಕಾಶ ಬೇಕು ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ಚುನಾಯಿತ ಜನಪ್ರತಿನಿಧಿಗಳ ಅವಧಿ ಏ.22ರಂದು ಮುಕ್ತಾಯಗೊಳ್ಳಲಿದೆ. ಆದರೆ, ಸರ್ಕಾರ ಈವರೆಗೂ ಚುನಾವಣೆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಪಾಲಿಕೆ ಸದಸ್ಯ ಸಿ.ಕೆ.ರಾಮಮೂರ್ತಿ ಹಾಗೂ ಬಿ.ಸೋಮಶೇಖರ್ ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದೆ. ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರೋ.ರವಿವರ್ಮ ಕುಮಾರ್ ವಾದ ಮಂಡಿಸಿ, ಬಿಬಿಎಂಪಿ ವಿಭಜನೆ ಅಧ್ಯಯನಕ್ಕೆ ನೇಮಕ ಮಾಡಿರುವ ತಜ್ಞರ ಸಮಿತಿ ಏಪ್ರಿಲ್ 1ರ ವೇಳೆಗೆ ವರದಿ ನೀಡಲಿದೆ.
ವರದಿ ಪರಿಶೀಲಿಸಿದ ನಂತರ ಏ.10ರೊಳಗೆ ಬಿಬಿಎಂಪಿಯ ವಿಭಜನೆ ಹಾಗೂ ಚುನಾವಣೆ ನಡೆಸುವ ಕುರಿತು ಸರ್ಕಾರ ಸ್ಪಷ್ಟ ನಿರ್ಣಯ ಕೈಗೊಳ್ಳಲಿದೆ ಎಂದು ಹೈಕೋರ್ಟ್‍ಗೆ ವಿವರಿಸಿದರು. ವಿಭಜನೆಯ ಅಧ್ಯಯನಕ್ಕೆ ನೇಮಕ ಮಾಡಿರುವ ಸಮಿತಿ ಶೀಘ್ರ ವರದಿ ನೀಡಲಿದೆ. ಆ ನಂತರ ಸಮಾಲೋಚನೆ ನಡೆಸಿ ಚುನಾವಣೆ ನಡೆಸುವ ಬಗ್ಗೆ ನಿರ್ದಿಷ್ಟ ನಿರ್ಣಯ ಕೈಗೊಳ್ಳಲು ವಿಳಂಬ ಮಾಡಲಾಗುತ್ತಿದೆ ಎಂದು ಪೀಠಕ್ಕೆ ಹೇಳಿದರು.
`ಬಿಬಿಎಂಪಿಯಲ್ಲಿ ಯಾವೆಲ್ಲಾ ಬದಲಾವಣೆಗಳು ಸಂಭವಿಸುತ್ತಿವೆ? ಒಂದು ವೇಳೆ ಸಮಿತಿ ವಿಭಜನೆ ಶಿಫಾರಸ್ಸು ಮಾಡಿದ್ದೇ ಆದಲ್ಲಿ ಅದನ್ನು ಸರ್ಕಾರ ಒಪ್ಪದಿದ್ದಾಗ ಮುಂದಿನ ಪರಿಸ್ಥಿತಿ ಏನು? ಹಾಲಿ ಸದಸ್ಯ ಅಧಿಕಾರವಧಿ ಏಪ್ರಿಲ್ 22ಕ್ಕೆ ಮುಗಿಯಲಿದೆ. ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ಚುನಾಯಿತ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾವಣೆ ನಡೆಸದಿದ್ದರೆ ಸಂವಿಧಾನ ಪರಿಚ್ಛೇದ 243ಕ್ಕೆ ವಿರುದ್ಧವಾಗುತ್ತದೆ. ಹಾಲಿ ಸದಸ್ಯರ ಮುಂದಿನ ಪರಿಸ್ಥಿತಿ ಏನು?'
-ಹೈಕೋರ್ಟ್ ಏಕಸದಸ್ಯ ಪೀಠ
`ವಿಭಜನೆಗೆ ಸರ್ಕಾರ ಒಪ್ಪಿದರೆ ಹಾಲಿ ಬಿಬಿಎಂಪಿಯನ್ನುವಿಸರ್ಜನೆ ಮಾಡಾಬೇಕಾಗುತ್ತದೆ. ನಂತರ ನಗರದಲ್ಲಿ ಎರಡು ಅಥವಾ ಮೂರು ನಗರ ಪಾಲಿಕೆಗಳು ಅಸ್ವಿತ್ವಕ್ಕೆ ಬರಬಹುದು. ಬಿಬಿಎಂಪಿಯೇ ವಿಸರ್ಜನೆಗೊಂಡರೆ ಸಂವಿಧಾನ ಪರಿಚ್ಛೇಧ 243 ಅನ್ವಯಿಸುವುದಿಲ್ಲ. ಹೀಗಾಗಿ, ಸಮಿತಿ ಏಪ್ರಿಲ್ 1ರ ವೇಳೆ ವರದಿ ನೀಡುವ ನಿರೀಕ್ಷೆಯಿದೆ. ಅದನ್ನು ಪರಿಶೀಲಿಸಿ ಚುನಾವಣೆ ನಡೆಸುವ ಕುರಿತು ಏ.10ರೊಳಗೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ'
-ಎಜಿ ರವಿವರ್ಮಕುಮಾರ್
ವಿಭಜನೆ ಹಾಗೂ ವಾರ್ಡ್ ವ್ಯಾಪ್ತಿ ಮರು ನಿಗದಿಕ್ಕೆ ಸುಮಾರು 3 ತಿಂಗಳ ಸಮಯ ಹಿಡಿಯಬಹುದು. ಅಲ್ಲದೆ, 2011 ಜನಗಣತಿ ಆಧಾರದ ಮೇಲೆ ಹೊಸದಾಗಿ ಮತದಾರರ ಪಟ್ಟಿ ಸಿದ್ದಪಡಿಸಬೇಕು. ಇದಕ್ಕಾಗಿ 3-4 ತಿಂಗಳ ಸಮಯ ಬೇಕಾಗುತ್ತದೆ. ಇದಕ್ಕೆ ರಾಜ್ಯಸರ್ಕಾರದ ಸಹಕಾರ ಅಗತ್ಯವಾಗಿದೆ. ಸರ್ಕಾರ ಅನುಮತಿ ನೀಡಿದ ನಂತರ ಆಯೋಗ ಚುನಾವಣೆಗೆ ಅಗತ್ಯ ಸಿದ್ದತೆ ನಡೆಸಲಿದೆ'
-ಚುನಾವಣಾ ಆಯೋಗದ ವಾದ