ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆರ್ ಟಿಐ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಸೋಮವಾರ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹುಬ್ಬಳ್ಳಿಯ ಉಪನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುತು ತಿಳಿಯದ ದುಷ್ಕರ್ಮಿಗಳು ಆರ್ ಟಿಐ ಕಾರ್ಯಕರ್ತ ಸಿಹೆಚ್ ಗೌರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಗೌರ್ ಅವರ ಬೈಕ್ ಅನ್ನು ನಾಲ್ಕೈದು ಬೈಕ್ ಗಳಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಹಲ್ಲೆಗೊಳಗಾದ ಗೌರ್ ಅವರನ್ನು ಪ್ರಸ್ತುತ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಕೃತ್ಯದ ಹಿಂದೆ ಹುಬ್ಬಳ್ಳಿ-ಧಾರವಾಡದ ಮಾಜಿ ಮೇಯರ್ ಹಾಗೂ ಹಾಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಕ್ಯಾರಕಟ್ಟಿ ಅವರ ಕೈವಾಡವಿದೆ ಎಂದು ಗೌರ್ ಸಂಬಂಧಿಕರು ಆರೋಪಿಸಿದ್ದಾರೆ. ಗೌರ್ ಅವರು ಪ್ರಕಾಶ್ ಕ್ಯಾರಕಟ್ಟಿ ಅವರ ಅಧಿಕಾರವಧಿಯಲ್ಲಿನ ಅಕ್ರಮಗಳ ಕುರಿತ ಮಾಹಿತಿಗಳನ್ನು ಆರ್ ಟಿಐ ಮೂಲಕ ಕೇಳಿದ್ದರು. ಅಲ್ಲದೆ ಕ್ಯಾರಕಟ್ಟಿ ಅವರ ಹಲವು ಅಕ್ರಮಗಳನ್ನು ಗೌರ್ ಬಯಲಿಗೆಳೆದಿದ್ದರು. ಈ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಗೌರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಗೌರ್ ವಿರುದ್ಧ ಕ್ಯಾರಕಟ್ಟಿ ಅವರು ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ಸುಳ್ಳುಕೇಸ್ ದಾಖಲಿಸಿದ್ದರು ಮತ್ತು ತಮಗೆ ಜೀವಬೆದರಿಕೆ ಹಾಕಿದ್ದರು ಎಂದು ಸ್ವತಃ ಗೌರ್ ಅವರು ಕ್ಯಾರಕಟ್ಟಿ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.