ಬೆಂಗಳೂರು: ನಗರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಸೆಕ್ಯುರಿಟಿ ಗಾರ್ಡ್ ಸೇರಿ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ. ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದು ಸೆಕ್ಯುರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಸಿಂಗಸಂದ್ರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಎಚ್‍ಎಸ್‍ಆರ್ ಲೇಔಟ್ ನಿವಾಸಿ ನೇಪಾಳ ಮೂಲದ ಗೋರಾ ಸಿಂಗ್ ಬೋರಾ (35) ಮೃತರು. ಎಚ್‍ಎಸ್ ಆರ್ ಲೇಔಟ್‍ನಲ್ಲಿರುವ ಹೋಟೆಲ್‍ನಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಸ್ನೇಹಿತನ ಮನೆಗೆ ಹೋಗಿದ್ದ ಬೋರಾ ವಾಪಸಾಗುತ್ತಿದ್ದಾಗ ವೇಗವಾಗಿ ಬಂದ ಟಿಟಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಅಪರಿಚಿತ ವಾಹನ ಡಿಕ್ಕಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ವಿದ್ಯಾನಗರ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಂಗನಾಥ (35) ಎಂಬುವರು ಮೃತಪಟ್ಟಿದ್ದಾರೆ.
ಬೆಟ್ಟಹಲಸೂರು ನಿವಾಸಿಯಾಗಿರುವ ರಂಗನಾಥ್ ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ವಿದ್ಯಾನಗರ ಕ್ರಾಸ್‍ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗೃಹಿಣಿ ಆತ್ಮಹತ್ಯೆ
ಬೆಂಗಳೂರು: ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಾಯಗೊಂಡಿದ್ದ ಗೃಹಿಣಿಂಯೊಬ್ಬರು ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಪ್ರಕಾಶನಗರ ನಿವಾಸಿ ಗೀತಾ (39) ಮೃತರು. ಮಕ್ಕಳಿಬ್ಬರೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸದ ಖರ್ಚಿಗಾಗಿ ದಂಪತಿ ಸಾಕಷ್ಟು ಸಾಲ ಮಾಡಿದ್ದರು. ಇದರ ಚಿಂತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.